ಬೆಂಗಳೂರು, ಅ.3- ರಾಮನಗರ, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಮಸ್ಯೆ ಆಲಿಸುವ ಉದ್ದೇಶದಿಂದ ಸಭೆ ಕರೆಯಲಾಗಿದೆಯೇ ಹೊರತು ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಮಾಡುವ ಉದ್ದೇಶದಿಂದ ಅಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ಬಿಡದಿ ಬಳಿಯ ಕೇತಗಾನಹಳ್ಳಿ ತೋಟದ ಮನೆಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಯಾರಾಗಬೇಕೆಂಬ ಕಾರ್ಯಕರ್ತರ ಅಭಿಪ್ರಾಯ ಆಧರಿಸಿ ನಿರ್ಧಾರ ಮಾಡಲಾಗುವುದು ಎಂದರು.
ಚನ್ನಪಟ್ಟಣ, ರಾಮನಗರದಿಂದ ನಿತ್ಯ ಬೆಂಗಳೂರಿಗೆ ತಮ್ಮ ಸಮಸ್ಯೆ ಹೇಳಿಕೊಳ್ಳಲು ಸಾರ್ವಜನಿಕರು ಮತ್ತು ಕಾರ್ಯಕರ್ತರು ಬರುತ್ತಿದ್ದರು. ಆಗ ಅವರ ಸಮಸ್ಯೆಗಳಿಗೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸದೇ ಇರಬಹುದು. ಹೀಗಾಗಿ ಮುಕ್ತವಾಗಿ ಎರಡು ವಿಧಾನಸಭಾ ಕ್ಷೇತ್ರಗಳ ಕಾರ್ಯಕರ್ತರೊಂದಿಗೆ ಪ್ರತ್ಯೇಕ ಸಭೆ ನಡೆಸಿ ಕುಂದು ಕೊರತೆಗಳನ್ನು ಆಲಿಸಲಾಗುವುದು ಎಂದು ತಿಳಿಸಿದರು.
ಕ್ಷೇತ್ರವಾರು ಹಾಗೂ ಆಯಾ ಗ್ರಾಮಗಳಲ್ಲಿ ಏನೇನು ಸಮಸ್ಯೆಗಳಿವೆ ? ಯಾವ ಕೆಲಸಗಳು ಆಗಬೇಕು ಎಂಬ ಬಗ್ಗೆ ಕಾರ್ಯಕರ್ತರಿಂದ ಮಾಹಿತಿ ಪಡೆಯಲು ಸಭೆ ನಡೆಸಲಾಗುತ್ತಿದೆ. ಪಕ್ಷದ ಆಂತರಿಕ ವಿಚಾರವಾಗಿರುವುದರಿಂದ ಮಾಧ್ಯಮಗಳ ಪ್ರವೇಶ ನೀಡದಂತೆ ತಾವೇ ಸೂಚನೆ ನೀಡಿದ್ದಾಗಿ ಸಿಎಂ ಹೇಳಿದರು.