ರಾಜ್ಯ ಸರ್ಕಾರಿ ನೌಕರರಿಗೆ ಸಿಹಿ-ಕಹಿ ಪ್ಯಾಕೇಜ್

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಇನ್ಮೇಲೆ ಕಾರ್ಪೊರೇಟ್ ಸ್ಟೈಲಲ್ಲಿ ಸರ್ಕಾರಿ ಕೆಲಸ ನಡೆಯುವ ಮೂಲಕ ಸಿಹಿ-ಕಹಿ ಪ್ಯಾಕೇಜ್ ದೊರೆಯಲಿದೆ.

ಹೌದು. ಸರ್ಕಾರಿ ನೌಕರರಿಗೆ ಐದು ದಿನ ಕೆಲಸ ಎರಡು ದಿನ ರಜೆ ನೀಡಲು ಸರ್ಕಾರದ ನಿರ್ಧರಿಸಿದೆ. ಎರಡನೇ ಶನಿವಾರದ ಜೊತೆಗೆ ನಾಲ್ಕನೇ ಶನಿವಾರವೂ ರಜೆ ನೀಡಲು 6ನೇ ವೇತನ ಆಯೋಗದ ಅಂತಿಮ ವರದಿ ಶಿಫಾರಸ್ಸಿಗೆ ಸರ್ಕಾರ ಚಿಂತನೆ ನಡೆಸಿದೆ.

ಸರ್ಕಾರಿ ಕೆಲಸದ ಅವಧಿ ಹೆಚ್ಚಳ ಮಾಡಿ ವೀಕೆಂಡ್‍ಗೆ ರಜೆ ನೀಡುವ ಚಿಂತನೆ ನಡೆಸಲಾಗಿದೆ. ಪ್ರಸ್ತುತ 10:30 ರಿಂದ 5:30 ತನಕ ಇರುವ ಕೆಲಸದ ಅವಧಿ, ಇನ್ಮುಂದೆ ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆ ತನಕ ಏರಿಸುವ ಸಾಧ್ಯತೆ ಇದೆ.

15 ಸಾಂದರ್ಭಿಕ ರಜೆಯನ್ನ ಎಂಟಕ್ಕೆ ಇಳಿಕೆ ಮಾಡುವ ಸಾಧ್ಯತೆಗಳಿದೆ. ಹಾಗೆಯೇ ನಾನಾ ಜಯಂತಿಗಳಿಗೆ ರಜೆ ನೀಡುವುದನ್ನ ಕಡಿತಗೊಳಿಸುವಂತೆ ಶಿಫಾರಸ್ಸು ಮಾಡಲಾಗಿದೆ. ವೇತನ ಹೆಚ್ಚಳಕ್ಕೆ ಕಾರ್ಯಕ್ಷಮತೆ ಅಳತೆಗೋಲು, ಕೆಲ ಇಲಾಖೆಗಳ ವಿಲೀನ ಸೇರಿದಂತೆ ನೌಕರರ ಕೆಂಗಣ್ಣಿಗೆ ಗುರಿಯಾಗುವಂಥ ಶಿಫಾರಸ್ಸುಗಳಿವೆ.

ನಾಳೆ ನಡೆಯುವ ಸಚಿವ ಸಂಪುಟ ಸಭೆಯಲ್ಲಿ ಆರನೇ ವೇತನ ಆಯೋಗದ ಅಂತಿಮ ವರದಿಯ ಶಿಫಾರಸ್ಸು ಕುರಿತು ರಾಜ್ಯ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂಬುದಾಗಿ ಮಾಹಿತಿ ಲಭಿಸಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ