
ಬೆಂಗಳೂರು, ಅ.3- ನ್ಯಾಯಾಲಯದ ವಿಚಾರ ಪೂರ್ಣಗೊಳ್ಳುವವರೆಗೂ ಗೋಕರ್ಣದ ಮಹಾಬಲ್ಲೇಶ್ವರ ದೇವಸ್ಥಾನ ರಾಮಚಂದ್ರಪುರ ಮಠದ ಸುಪರ್ದಿಯಲ್ಲೇ ಮುಂದುವರೆಯಬೇಕೆಂದು ಸುಪ್ರೀಂಕೋರ್ಟ್ ಮಧ್ಯಂತರ ತೀರ್ಪು ನೀಡಿದೆ.
ರಾಮಚಂದ್ರಪುರ ಮಠ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸೆ.17,18ರಂದು ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದು ಮಾಡಿದೆ.
ಈ ಮೊದಲು ರಾಮಚಂದ್ರಪುರ ಮಠದ ಅಧೀನದಲ್ಲಿದ್ದ ಗೋಕರ್ಣ ದೇವಸ್ಥಾನವನ್ನು ಹಿಂಪಡೆಯಲು ಸರ್ಕಾರ ಪ್ರಯತ್ನ ನಡೆಸಿತ್ತು. ಅದನ್ನು ಪ್ರಶ್ನಿಸಿ ರಾಮಚಂದ್ರಪುರ ಮಠ ನ್ಯಾಯಾಲಯದ ಮೆಟ್ಟಿಲೇರಿತ್ತು.
ಸೆ.7ರಂದು ನಡೆದ ವಿಚಾರಣೆಯಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು. ಯಥಾಸ್ಥಿತಿ ಎಂದರೆ ಈ ಮೊದಲಿದ್ದಂತೆ ದೇವಸ್ಥಾನವನ್ನು ಸರ್ಕಾರದ ಸುಪರ್ದಿಗೆ ತೆಗೆದುಕೊಳ್ಳುವುದು ಎಂದು ಅರ್ಥೈಸಿಕೊಂಡು ಉತ್ತರ ಕನ್ನಡ ಜಿಲ್ಲಾಧಿಕಾರಿಗಳು ಸೆ.17,18ರಂದು ಹೊಸ ಆದೇಶ ಹೊರಡಿಸಿದ್ದರು. ಅದರ ಪ್ರಕಾರ ರಾಮಚಂದ್ರಪುರ ಮಠ ಸರ್ಕಾರದ ವಶಕ್ಕೆ ಬರಬೇಕಿತ್ತು.
ಆದರೆ, ಮಠ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸ್ಪಷ್ಟ ಆದೇಶ ನೀಡಿದ್ದು, ನ್ಯಾಯಾಲಯ ವಿಚಾರಣೆ ನಡೆಸಿ ತನ್ನ ತೀರ್ಪು ನೀಡುವವರೆಗೂ ಗೋಕರ್ಣ ದೇವಸ್ಥಾನ ರಾಮಚಂದ್ರಪುರ ಮಠದ ಸುಪರ್ದಿಯಲ್ಲೇ ಮುಂದುವರೆಯಬೇಕೆಂದು ತಾಕೀತು ಮಾಡಿದೆ.
ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಯಡಿಯೂರಪ್ಪ ಅವರು ದೇವಸ್ಥಾನವನ್ನು ರಾಮಚಂದ್ರಪುರ ಮಠದ ಸುಪರ್ದಿಗೆ ನೀಡಿದ್ದರು. ಇತ್ತೀಚಿಗೆ ಅದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ವಿವಾದ ಸುದೀರ್ಘ ವಿಚಾರಣೆಗೆ ಒಳಪಟ್ಟಿದೆ.