ಬೆಂಗಳೂರು, ಅ.2-ಮಹಾತ್ಮಗಾಂಧೀಜಿಯವರ ತತ್ವ ಆದರ್ಶಗಳು ಸಾರ್ವಕಾಲಿಕವಾಗಿವೆ ಎಂದು ಕನ್ನಡ ಮತ್ತು ಸಂಸ್ಕøತಿ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್ ಅಭಿಪ್ರಾಯಪಟ್ಟರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕೇಂದ್ರ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಕಾರ್ಯಕ್ರಮದಲ್ಲಿ ಗಾಂಧಿ ಪ್ರತಿಮೆಗೆ ಪುಷ್ಪನಮನ ಅರ್ಪಿಸಿದ ನಂತರ ಮಾತನಾಡಿದ ಅವರು, ಮಹಾತ್ಮಗಾಂಧೀಜಿಯವರ ತತ್ವಗಳನ್ನು ಸಾರುವ ಉದ್ದೇಶದಿಂದ ಹಾಗೂ ಉತ್ತಮವಾದ ವಾತಾವರಣವನ್ನು ನಿರ್ಮಿಸಲು ವಾರ್ತಾ ಇಲಾಖೆಯ ಕೇಂದ್ರ ಕಚೇರಿ ಆವರಣದಲ್ಲಿ 3 ವರ್ಷಗಳ ಹಿಂದೆಯೇ ಗಾಂಧಿ ಅಂಗಳವನ್ನು ನಿರ್ಮಿಸಲಾಯಿತು. ಇದು ಅತ್ಯಂತ ಸುಂದರವಾದ ಗಾಂಧಿ ಅಂಗಳವಾಗಿರುವುದು ತಮಗೆ ಸಂತಸ ತಂದಿದೆ ಎಂದರು.
ಗಾಂಧಿ ಅಂಗಳಕ್ಕೆ ನಾಡಿನ ಅನೇಕ ಗಣ್ಯರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದ ಅವರು, ಮಹಾತ್ಮಗಾಂಧೀಜಿಯವರ ಅಹಿಂಸಾ ಮಾರ್ಗ ವಿಶ್ವದಾದ್ಯಂತ ಪ್ರತಿಭಟನೆಯ ಅಸ್ತ್ರವಾಗಿದೆ. ಇದು ಅತ್ಯುತ್ತಮ ಮಾರ್ಗ. ಅದಕ್ಕಾಗಿಯೇ ಇಂದು ವಿಶ್ವದಲ್ಲಿ ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಯಾವುದೇ ಸೌಲಭ್ಯಗಳಿಲ್ಲದ ಕಾಲದಲ್ಲೂ ಭಾರತ ಪ್ರವಾಸ ಮಾಡಿದ ಗಾಂಧೀಜಿಯವರು ಕರ್ನಾಟಕಕ್ಕೂ ಹಲವು ಬಾರಿ ಭೇಟಿ ನೀಡಿದ್ದಾರೆ.
ನಂದಿ ಬೆಟ್ಟ ಗಾಂಧೀಜಿಯವರ ನೆಚ್ಚಿನ ಸ್ಥಳವಾಗಿತ್ತು. ಗಾಂಧಿ ಅಂಗಳ ಇತರ ಇಲಾಖೆಗಳಿಗೆ ಮಾದರಿಯಾಗಿರುವುದಲ್ಲದೆ, ನಮ್ಮ ಇಲಾಖೆಗೆ ಕಳಸಪ್ರಾಯವಾಗಿದೆ ಎಂದು ಹೇಳಿದರು.
ರಾಜ್ಯ ಸರ್ಕಾರ ಮಹಾತ್ಮಗಾಂಧೀಜಿಯವರ 150ನೇ ಜನ್ಮ ವರ್ಷಾಚರಣೆ ಅಂಗವಾಗಿ ರಾಜ್ಯಾದ್ಯಂತ ಗಾಂಧಿ ತತ್ವಗಳನ್ನು ಪ್ರಸಾರ ಮಾಡುವ ಕಾರ್ಯಕ್ರಮ ಸಮನ್ವಯವನ್ನು ನಮ್ಮ ಇಲಾಖೆ ನಿರ್ವಹಿಸುತ್ತಿದೆ. ವರ್ಷವೀಡಿ ಹಲವು ಕಾರ್ಯಕ್ರಮ ಹಮ್ಮಿಕೊಳ್ಳಲಿದೆ ಎಂದು ಹೇಳಿದರು.
ಇಲಾಖೆ ಜಂಟಿ ನಿರ್ದೇಶಕರಾದ ಎಂ.ರವಿಕುಮಾರ್, ಎನ್.ಭೃಂಗೇಶ್, ಎಚ್.ಪಿ.ದಿನೇಶ್, ಕೆ.ಆರ್.ಪ್ರಕಾಶ್ ಅವರು ಮಹಾತ್ಮಗಾಂಧೀಜಿಯವರ ತತ್ವಗಳು ಹಾಗೂ ಇಂದಿನ ಕಾಲಮಾನಕ್ಕೆ ಅವುಗಳ ಪ್ರಾಮುಖ್ಯತೆ ಕುರಿತು ಅವರು ಮಾತನಾಡಿದರು.
ಇಲಾಖೆಯ ಉಪನಿರ್ದೇಶಕರಾದ ಬಸವರಾಜ್ ಕಂಬಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.