ಬೆಂಗಳೂರು, ಅ.2- ಹಿಂದಿನ ಸರ್ಕಾರ ಕಡೆಯ ಕೆಲ ತಿಂಗಳುಗಳಲ್ಲಿ ಬಿಡುಗಡೆ ಮಾಡಿದ್ದ ದೊಡ್ಡ ಮೊತ್ತದ ಅನುದಾನವನ್ನು ಈ ಸರ್ಕಾರ ಇನ್ನೂ ಬಿಡುಗಡೆ ಮಾಡುವ ಕಾರ್ಯವೇ ಮಾಡದಿರುವುದು ಹಲವು ಶಾಸಕರ ಆಕ್ರೋಶಕ್ಕೆ ಕಾರಣ ಎನ್ನಲಾಗುತ್ತಿದೆ.
ಸಾಕಷ್ಟು ಹಿರಿಯ ಶಾಸಕರು, ಸಚಿವರಾಗಿದ್ದವರು ಕೂಡ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಮನೆ ಸೇರಿದ್ದಾರೆ. ಹೀಗಿರುವಾಗ ಕೆಲ ಶಾಸಕರು ಮರು ಆಯ್ಕೆಯಾಗಿದ್ದು, ಸದ್ಯ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗದೇ ಪರಿತಪಿಸುತ್ತಿದ್ದಾರೆ. ಸರ್ಕಾರ ಅಸ್ಥಿತ್ವಕ್ಕೆ ಬಂದು ನಾಲ್ಕು ತಿಂಗಳು ಕಳೆದಿದ್ದರೂ, ಇನ್ನೂ ಯಾವುದೇ ಕ್ಷೇತ್ರಕ್ಕೆ ಸರಿಯಾಗಿ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂದು ಕಾಂಗ್ರೆಸ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಿಂದಿನ ಅನುದಾನವೇ ಬಂದಿಲ್ಲ:
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಡೆಯ ದಿನಗಳಲ್ಲಿ ಘೋಷಿಸಿದ್ದ 1,791 ಕೋಟಿ ರೂ.ಗಳನ್ನು ರಾಜ್ಯದ 200ಕ್ಕೂ ಅಧಿಕ ವಿಧಾನಸಭಾ ಕ್ಷೇತ್ರಗಳಲ್ಲಿನ ಕಾಮಗಾರಿಗೆ ಬಾಕಿ ಕೊಡಬೇಕಾಗಿತ್ತು. 2018-19ನೇ ಆರ್ಥಿಕ ವರ್ಷದಲ್ಲಿ ಈ ಹಣ ಬಿಡುಗಡೆ ಮಾಡಲು ಹಣಕಾಸು ಇಲಾಖೆ ಒಪ್ಪಿಗೆ ನೀಡಿದೆಯಾದರೂ ಯಾವ ಕ್ಷೇತ್ರಕ್ಕೂ ಈ ತನಕ ಒಂದು ರೂಪಾಯಿಯನ್ನೂ ಕೊಟ್ಟಿಲ್ಲ. ಕಾಮಗಾರಿ ಮುಗಿದರೂ ಸರ್ಕಾರ ಹಣ ಕೊಡುತ್ತಿಲ್ಲ ಎಂದು ಈ ಸಾರಿ ಮರು ಆಯ್ಕೆಯಾಗಿರುವ ಹಲವು ಕಾಂಗ್ರೆಸ್ ಶಾಸಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಿದ್ದರಾಮಯ್ಯ ಮೇಲೆ ರೇವಣ್ಣ ಪ್ರೀತಿ:
ಏಕಾಏಕಿ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣಗೆ ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಪ್ರೀತಿ ಉಕ್ಕಿ ಹರಿದಿದೆ. ಹಳೆಯ ಹಾಗೂ ಹೊಸ ಯೋಜನೆಗಳಿಗೆ ಹಣ ಬಿಡುಗಡೆ ಮಾಡಲು ಪರದಾಡುತ್ತಿರುವ ಸರ್ಕಾರ, ಅನಾಮತ್ತಾಗಿ ಸಿದ್ದರಾಮಯ್ಯ ಪ್ರತಿನಿಧಿಸುವ ಬದಾಮಿ ಕ್ಷೇತ್ರವೊಂದರ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆ ಒಂದರಿಂದಲೇ 65 ಕೋಟಿ ರೂ. ಅನುದಾನವನ್ನು ಬಿಡುಗಡೆ ಕೂಡ ಮಾಡಿದೆ.
ಇಷ್ಟೊಂದು ಮೊತ್ತವನ್ನು ಏಕಾಏಕಿ ಬಿಡುಗಡೆ ಮಾಡಿರುವ ಹಿಂದೆ ಋಣ ಸಂದಾಯವಿದೆ ಎನ್ನಲಾಗುತ್ತಿದೆ. ನಿಜ, ಸಿದ್ದರಾಮಯ್ಯ ಯೂರೋಪ್ ಪ್ರವಾಸ ತೆರಳಿದ್ದ ಸಂದರ್ಭ ಕೆಲ ಶಾಸಕರು ತಮ್ಮ ಅಸಮಾಧಾನ ಹೊರ ಹಾಕಿದ್ದರು. ಯಾರೇ ಮನವೊಲಿಸುವ ಯತ್ನ ಮಾಡಿದ್ದರೂ ಫಲಕೊಟ್ಟಿರಲಿಲ್ಲ. ಸಿದ್ದರಾಮಯ್ಯ ವಾಪಾಸ್ ಆಗಿದ್ದೇ ಕೆಲವರ ಮನವೊಲಿಸುವ ಮೂಲಕ ಬಿದ್ದುಹೋಗಲಿದ್ದ ಸರ್ಕಾರವನ್ನು ಉಳಿಸಿದರು. ಇದಕ್ಕೆ ಪ್ರತಿಯಾಗಿ ಸರ್ಕಾರ ಈ ಉಡುಗೊರೆ ನೀಡಿದೆ ಎನ್ನುವ ಮಾತು ಕೇಳಿಬರುತ್ತಿದೆ.
ಹೆಚ್ಚಲಿದೆ ಆಕ್ರೋಶ ಭುಗಿಲು:
ಕೇವಲ ಸಿದ್ದರಾಮಯ್ಯರ ಬದಾಮಿ ಕ್ಷೇತ್ರಕ್ಕೆ ಮಾತ್ರ ಹಣ ಬಿಡುಗಡೆ ಮಾಡಿರುವ ಸರ್ಕಾರದ ನಿಲುವು ಮುಂದಿನ ದಿನಗಳಲ್ಲಿ ಸರ್ಕಾರದ ಮಿತ್ರ ಪಕ್ಷಗಳಲ್ಲಿ ಸಾಕಷ್ಟು ದೊಡ್ಡ ಬಿರುಕು ಮೂಡಿಸಲಿದೆ ಎನ್ನಲಾಗುತ್ತಿದೆ. ಸದ್ಯವೇ ಸಚಿವ ಸಂಪುಟ ವಿಸ್ತರಣೆ ಕೂಡ ನಡೆಯಲಿದ್ದು, ಅಲ್ಲಿ ಅತೃಪ್ತಿಗೊಳ್ಳುವ ಶಾಸಕರು ಅಸಮಾಧಾನ ವ್ಯಕ್ತಪಡಿಸಬಹುದು, ಬಂಡಾಯವೇಳಬಹುದು ಎನ್ನಲಾಗುತ್ತಿದೆ.
ಇನ್ನು ಬಿಎಸ್ಪಿಯಿಂದ ಆಯ್ಕೆಯಾಗಿ ಸಚಿವರಾಗಿರುವ ಆರ್. ಶಂಕರ್ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸುವ ಚಿಂತನೆಯನ್ನು ಜೆಡಿಎಸ್ ನಡೆಸಿದೆ. ಅದಾದರೆ ಮತ್ತಷ್ಟು ಸಮಸ್ಯೆ ಸರ್ಕಾರಕ್ಕೆ ಎದುರಾಗಲಿದೆ. ಒಂದು ಸಮಸ್ಯೆ ಮುಚ್ಚಿಕೊಳ್ಳಲು ಇನ್ನೂ ನಾಲ್ಕಾರು ಸಮಸ್ಯೆ ತಲೆ ಮೇಲೆ ಹಾಕಿಕೊಳ್ಳಲು ಸರ್ಕಾರ ಮುಂದಾಗಿದೆ. ಇದು ಮತ್ತೆ ಬಿಜೆಪಿ ಆಪರೇಷನ್ ಕಮಲ ಆಸೆ ಚಿಗುರಲು ನೀರೆರೆಯಲಿದೆ ಎನ್ನುವ ಮಾತು ಕೇಳಿಬರುತ್ತಿದೆ.