ಬೆಂಗಳೂರು, ಅ.2- ರೈಲು ಮತ್ತು ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ ಎಂದು ಡಿವಿಜನಲ್ ರೈಲ್ವೆ ಮ್ಯಾನೇಜರ್ ಆರ್.ಎಸ್.ಸಕ್ಸೇನಾ ಇಂದಿಲ್ಲಿ ತಿಳಿಸಿದರು.
ಸ್ವಚ್ಛ ಭಾರತ ಆಂದೋಲನದ ನಂತರ ರೈಲ್ವೆ ಇಲಾಖೆಯಲ್ಲಿ ಸ್ವಚ್ಛತೆ ಆದ್ಯತೆ ನೀಡಲಾಗಿದ್ದು, ಕಳೆದ ಸೆ.15ರಿಂದ ನಗರದಲ್ಲಿರುವ ರೈಲು ನಿಲ್ದಾಣಗಳಲ್ಲಿ ಸ್ವಚ್ಛತಾ ಪಾಕ್ಷಿಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿತ್ತು ಎಂದು ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.
ಕಳೆದ 15ರಿಂದ ಇಲ್ಲಿಯವರೆಗೂ ನಡೆದ ಸ್ವಚ್ಛತಾ ಆಂದೋಲನದಲ್ಲಿ ರೈಲ್ವೆ ಸಿಬ್ಬಂದಿಗಳು ಹಾಗೂ ವಿವಿಧ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಈ ಶ್ರಮಾದಾನದಲ್ಲಿ ಪಾಲ್ಗೊಂಡ ಸಿಬ್ಬಂದಿಗಳು ಮತ್ತು ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಲಾಗುವುದು ಎಂದು ಹೇಳಿದರು.
ಸೆ.15ರಂದು ರೈಲ್ವೆ ಸಿಬ್ಬಂದಿಗಳು ಸಿಟಿ ರೈಲ್ವೆ ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡುವ ಬಗ್ಗೆ ತಿಳುವಳಿಕೆ ನೀಡಿದರು. 16ರಂದು ಸಾರ್ವಜನಿಕರೊಂದಿಗೆ ಸ್ವಚ್ಛತೆ ಕುರಿತಂತೆ ಸಭೆ ನಡೆಸಲಾಯಿತು.
17ರಂದು ಸ್ವಚ್ಛತಾ ಸಿಬ್ಬಂದಿಗಳಿಗೆ ರೈಲು ಮತ್ತು ನಿಲ್ದಾಣಗಳನ್ನು ಶುಚಿಯಾಗಿಟ್ಟುಕೊಳ್ಳುವ ಕುರಿತಂತೆ ತಿಳುವಳಿಕೆ ಮೂಡಿಸಲಾಯಿತು. 18ರಂದು ಎಲ್ಲ ರೈಲು ನಿಲ್ದಾಣಗಳಲ್ಲಿ ಕಸದ ಬುಟ್ಟಿಗಳನ್ನಿಟ್ಟು ತ್ಯಾಜ್ಯವನ್ನು ಡಸ್ಟ್ಬಿನ್ನಲ್ಲೇ ಹಾಕುವಂತೆ ತಿಳಿಸಲಾಯಿತು.
19 ರಿಂದ 29ರ ವರೆಗೆ ರೈಲ್ವೆ ನಿಲ್ದಾಣದ ಸುತ್ತಮುತ್ತಲ ಪ್ರದೇಶ, ಆವರಣ, ರೈಲು ಬೋಗಿಗಳು ಹಾಗೂ ಶೌಚಾಲಯಗಳನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಿಬ್ಬಂದಿಗಳಿಗೆ ತಾವು ಕರ್ತವ್ಯನಿರ್ವಹಿಸುವ ಪ್ರದೇಶವನ್ನು ಶುಚಿಯಾಗಿಟ್ಟುಕೊಳ್ಳಲು ಆದ್ಯತೆ ನೀಡುವಂತೆ ಸೂಚಿಸಲಾಯಿತು ಎಂದು ಸಕ್ಸೇನಾ ಹೇಳಿದರು.
ಸೆ.30ರಂದು ಸ್ವಚ್ಛತೆ ಬಗ್ಗೆ ಕಾಂಪಿಟೇಷನ್ ನಡೆಸಲಾಯಿತು. ಇಂದು 15 ದಿನಗಳ ಸ್ವಚ್ಛತಾ ಪಾಕ್ಷಿಕ ಜಾಗೃತಿ ಅಭಿಯಾನ ಸಮಾರೋಪಗೊಳ್ಳಲಿದೆ ಎಂದು ಅವರು ವಿವರಿಸಿದರು.
ಇದೇ ಸಂದರ್ಭದಲ್ಲಿ ಅವರು ಗಾಂಧಿಜಯಂತಿ ಅಂಗವಾಗಿ ರೈಲ್ವೆ ನಿಲ್ದಾಣದಲ್ಲಿ ಗಾಂಧೀಜಿ ಕುರಿತ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.
ಭವಿಷ್ಯದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲು ರೈಲ್ವೆ ಇಲಾಖೆ ತೀರ್ಮಾನಿಸಿದ್ದು, ಪ್ರಯಾಣಿಕರು ಬಳಸುವ ಶೌಚಾಲಯ ಹಾಗೂ ಸರಬರಾಜು ಮಾಡಲಾಗುವ ಊಟ-ತಿಂಡಿ ಶುಚಿ-ರುಚಿಯಾಗಿರುವಂತೆ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ರೈಲ್ವೆ ಇಲಾಖೆ ಸಿಬ್ಬಂದಿಗಳು ಇನ್ನು ಮುಂದೆ ತಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರ ಜತೆಗೆ ಪ್ರಯಾಣಿಕರಿಗೂ ಸ್ವಚ್ಛತೆ ಬಗ್ಗೆ ತಿಳಿ ಹೇಳಬೇಕು ಎಂದು ಅವರು ಕರೆ ನೀಡಿದರು.