ಜಾರಕಿಹೊಳಿ ಬ್ರದರ್ಸ್​​ ಪ್ರಭಾವ, ಹೆಬ್ಬಾಳ್ಕರ್​ಗೆ ಸಂಕಷ್ಟ: ಸದ್ಯದಲ್ಲೇ ಮಹಿಳಾ ಕಾಂಗ್ರೆಸ್​​ ಅಧ್ಯಕ್ಷೆ ಸ್ಥಾನದಿಂದ ಔಟ್​​..!

ಬೆಂಗಳೂರು: ರಾಜ್ಯ ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಸ್ಥಾನದಿಂದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಕಿತ್ತೊಗೆಯುವುದು ಬಹುತೇಖ ಖಚಿತವಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್‌ ​​ಅವರನ್ನು ಪದಚ್ಯುತಗೊಳಿಸಲು ಹೈಕಮಾಂಡ್​​ ಮಟ್ಟದಲ್ಲಿ ಜಾರಕಿಹೊಳಿ ಬ್ರದರ್ಸ್ ನಡೆಸಿದ ಪ್ರಯತ್ನ ಫಲಿಸಿದೆ. ಕೊನೆಗೂ ಸಿದ್ದರಾಮಯ್ಯನವರ ಮೂಲಕ ಒತ್ತಡ ನಿರ್ಮಾಣ ತೊಡಗಿದ್ದ ಜಾರಕೊಹೊಳಿ ಸಹೋದರರ ಪ್ರಯತ್ನಕ್ಕೆ ಫಲ ಸಿಕ್ಕಿದೆ.
ಜಾರಕಿಹೊಳಿ ಬ್ರದರ್ಸ್​​ ಪ್ರಭಾವಕ್ಕೆ ಮಣಿದು ಲಕ್ಷ್ಮೀ ಹೆಬ್ಬಾಳ್ಕರ್‌ ಅವರನ್ನು ಪ್ರತಿಷ್ಠಿತ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆಯ ಹುದ್ದೆಯಿಂದ ಹೈಕಮಾಂಡ್​​ ಕೆಳಗಿಳಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆಯೇ ಆರು ಜನ ಲಾಬಿ ನಡೆಸುತ್ತಿದ್ದಾರೆ. ಮೊದಲಿಗೆ ನಾಲ್ವರು ಮಹಿಳಾ‌ ನಾಯಕಿಯರು ಮಂಚೂಣಿಯಲ್ಲಿದ್ದರು. ಇದೀಗ ಮತ್ತಿಬ್ಬರು ಮಹಿಳಾ ನಾಯಕಿಯರು ಲಾಬಿ ನಡೆಸಲು ಮುಂದಾಗಿದ್ದಾರೆ.
ಮಾಜಿ‌ ಮೇಯರ್ ಪದ್ಮಾವತಿ ಕೂಡ ಪ್ರಯತ್ನಿಸುತ್ತಿದ್ದು ಕಾಂಗ್ರೆಸ್ ಕಾರ್ಪೋರೇಟರ್ ಮೂಲಕ‌ ನಾಯಕರಿಗೆ ಒತ್ತಡ ಹೇರುತ್ತಿದ್ದಾರೆ. ಸಚಿವ ಡಿಕೆಶಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಡ ಹಾಕಲು ಪದ್ಮಾವತಿ ಬಣ ನಿರ್ಧಾರ ಮಾಡಿದೆ. ಈಗಾಗಲೇ ಬೆಂಗಳೂರು ಮೇಯರ್ ಆಗಿ‌ ಒಳ್ಳೆ ಹೆಸರು ಮಾಡಿದ್ದೇನೆ. ರಾಜ್ಯ ಸುತ್ತಿ‌ ಮಹಿಳೆಯರ ಸಂಘಟನೆ ಮಾಡುವ ಸಾಮರ್ಥ್ಯ ನನಗಿದೆ. ಹೀಗಾಗಿ ನನ್ನನ್ನು ಆಯ್ಕೆ ಮಾಡಿ ಎಂದು ಬೇಡಿಕೆಯಿಟ್ಟಿದ್ದಾರೆ.
ಇನ್ನು ಹಲವರು ರಾಜ್ಯ ನಾಯಕರ ಮೂಲಕ ರಾಷ್ಟ್ರೀಯ ಮಹಿಳಾ ಕಾಂಗ್ರೆಸ್​​ ಅಧ್ಯಕ್ಷೆ ಸುಶ್ಮಿತಾ ದೇವ್​ಗೆ ಒತ್ತಡ ಹಾಕಿಸುತ್ತಿದ್ದಾರೆ. ಈ ಬೆನ್ನಲ್ಲೇ ಎಚ್ಚೆತ್ತ ಲಕ್ಷ್ಮೀ ಹೆಬ್ಬಾಳ್ಕರ್‌ ತನ್ನ ಆಪ್ತೆ, ಎಐಸಿಸಿ ಸದಸ್ಯೆ ಶಾರದಾ ಗೌಡ ಅವರನ್ನು ಮಹಿಳಾ ಕಾಂಗ್ರೆಸ್​​ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವಂತೆ ಲಾಬಿ ನಡೆಸುತ್ತಿದ್ದಾರೆ. ತೆರೆಮರೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ,ಹಿರಿಯ ಕಾಂಗ್ರೆಸ್ಸಿಗ ಗುಲಾಂ ನಭಿ ಆಜಾದ್ ಮೂಲಕ ಸುಶ್ಮಿತಾ ದೇವ್​ಗೆ ಒತ್ತಡ ಹಾಕಿಸುತ್ತಿದ್ದಾರೆ.
ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷೆ ಸ್ಥಾನದಿಂದ ರಾಜ್ಯ ಕಾಂಗ್ರೆಸ್‌ನ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಲಕ್ಷ್ಮಿ ಹೆಬ್ಬಾಳ್ಕರ್​​ ನೇಮಕ ಆಗಿದ್ದರು. ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರೇ ಹೆಬ್ಬಾಳ್ಕರ್​​ ಅವರನ್ನು ನೇಮಕಮಾಡಿದ್ದರು. ಆಕೆ ಅಧ್ಯಕ್ಷೆ ಹುದ್ದೆಯ ಅವಧಿ ಮುಗಿದು ಮೂರು ತಿಂಗಳಾಗಿದೆ. ಆದರೂ ಮತ್ತೆ ಮೂರು ವರ್ಷ ತಾನೇ ಮುಂದುವರೆಬೇಕೆಂದು ಲಕ್ಷ್ಮಿ ಹೆಬ್ಬಾಳ್ಕರ್​​ ಆಸೆ.
ಬೆಳಗಾವಿ ಕಾಂಗ್ರೆಸ್‌ ರಾಜಕಾರಣದಲ್ಲಿ ಜಾರಕಿಹೊಳಿ ಬ್ರದರ್ಸ್​​ ವಿರುದ್ಧ ತಿರುಗಿಬಿದ್ದ ಬಳಿಕ ಹೆಬ್ಬಾಳ್ಕರ್​​ ಆಸೆಗೆ ತಣ್ಣೀರು ಎರುಚುವಂತಾಯ್ತು. ಸಹೋದರರಾದ ಸತೀಶ್‌ ಜಾರಕಿಹೊಳಿ, ರಮೇಶ್‌ ಜಾರಕಿಹೊಳಿ ಸಿಟ್ಟು ಕೊನೆಗೂ ಹೆಬ್ಬಾಳ್ಕರ್​​ ಅವರನ್ನು ಅಧ್ಯಕ್ಷೆ ಸ್ಥಾನದಿಂದ ಕೆಳಗಳಿಸುವುದಕ್ಕೆ ಕಾರಣವಾಗುತ್ತಿದೆ. ಲಕ್ಷ್ಮೀ ಅವರು ಲೋಕಸಭಾ ಚುನಾವಣೆವರೆಗೂ ತಮ್ಮ ಸ್ಥಾನ ಉಳಿಸಿಕೊಳ್ಳಲು ಎಲ್ಲಾ ಶಕ್ತಿ ಬಳಸಿದರೂ ಆಗುತ್ತಿಲ್ಲ ಎನ್ನುತ್ತಿವೆ ಮೂಲಗಳು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ