ದೇಶಕ್ಕೆ ಒಗ್ಗೂಡಿಸುವ ಗಾಂಧೀಜಿ ತತ್ವಗಳು ಬೇಕೆ ? ಅಥವಾ ಸಮಾಜ ವಿಭಜಿಸುವ ಪ್ರಧಾನಿ ಮೋದಿ ಸಿದ್ಧಾಂತ ಬೇಕೇ?; ಜನ ನಿರ್ಧರಿಸಬೇಕು: ಡಿಸಿಎಂ

ಬೆಂಗಳೂರು, ಅ.2- ಪ್ರಸ್ತುತ ದೇಶಕ್ಕೆ ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಮಹಾತ್ಮಗಾಂಧೀಜಿ ಅವರ ತತ್ವಗಳು ಬೇಕೆ ? ಅಥವಾ ಸಮಾಜವನ್ನು ವಿಭಜನೆ ಮಾಡುವ ನರೇಂದ್ರ ಮೋದಿ ಅವರ ಸಿದ್ಧಾಂತ ಬೇಕೇ ಎಂಬುದನ್ನು ಜನ ನಿರ್ಧರಿಸಬೇಕಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದರು.

ರೇಸ್‍ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಮಹಾತ್ಮಗಾಂಧೀಜಿ ಅವರ 150ನೇ ಜನ್ಮ ದಿನಾಚರಣೆ ಆಹಗೂ ಲಾಲ್‍ಬಹದ್ದೂರ್ ಶಾಸ್ತ್ರಿಯವರ 112ನೇ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಾಂಧೀಜಿ ಆದರ್ಶಗಳು ಸಮಾನತೆಯ ಸಮಾಜ, ದೇಶದ ಅಭಿವೃದ್ಧಿ, ಪ್ರತಿಯೊಬ್ಬರಿಗೂ ಅವಕಾಶ ಸಿಗಬೇಕು ಎಂಬುದಾಗಿತ್ತು. ಆದರೆ, ಪ್ರಧಾನ ಮಂತ್ರಿ ಮೋದಿ ಅವರ ಸಿದ್ಧಾಂತಗಳು ಇದಕ್ಕೆ ವಿರುದ್ಧವಾಗಿವೆ ಎಂದರು.
ಧರ್ಮಾಧಾರಿತವಾಗಿ ಕಂದಕ ಸೃಷ್ಟಿಸುವುದು, ಅಸಮಾನತೆಯನ್ನು ಬೆಳೆಸುವುದು, ಮತ್ತೊಂದು ಧರ್ಮ ಸಹಿಸದಿರುವ ಮನಸ್ಥಿತಿ ನಿರ್ಮಿಸುವುದಾಗಿದೆ. ದೇಶದ ಜನ ಯಾವ ಸಿದ್ಧಾಂತ ಬೇಕು ಎಂಬುದನ್ನು ನಿರ್ಧರಿಸಬೇಕಿದೆ ಎಂದು ತಿಳಿಸಿದರು.

ಮಹಾತ್ಮಗಾಂಧೀಜಿ ಅವರ ತತ್ವ ಸಿದ್ಧಾಂತಗಳು ಸೂರ್ಯ, ಚಂದ್ರರಷ್ಟೇ ಶಾಶ್ವತವಾಗಿರಲಿವೆ. ಗಾಂಧೀಜಿ ಸರಳ ಜೀವನ ನಡೆಸುವ ಮೂಲಕವೇ ಆದರ್ಶವಾಗಿ ಬದುಕಿದವರು. ಸರ್ವ ಧರ್ಮ ಸಹಿಷ್ಣತೆಯನ್ನು ಆದರ್ಶವಾಗಿ ಬೆಳೆಸಿದವರು. 21ನೇ ಶತಮಾನದಲ್ಲಿ ಯುವ ಪೀಳಿಗೆಯಲ್ಲಿ ಗಾಂಧೀಜಿ ಅವರ ಆದರ್ಶಗಳನ್ನು ಬೆಳೆಸಬೇಕಿದೆ. ಗಾಂಧೀಜಿ ಅವರ ಎಲ್ಲಾ ಆದರ್ಶಗಳನ್ನು ಪಾಲಿಸಲು ಕಷ್ಟವಾಗಬಹುದು. ಕನಿಷ್ಠ ಅವರ ಒಂದು ಸಂದೇಶವನ್ನು ನಾವು ಪಾಲನೆ ಮಾಡಬೇಕಾಗಿದೆ. ಕಾಂಗ್ರೆಸ್ ಪಕ್ಷವಂತು ಗಾಂಧೀಜಿ ಅವರ ನೆರಳನ್ನು ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದು ಹೇಳಿದರು.

ಪ್ರಧಾನಿ ಮೋದಿ ಅವರು ಈ ಹಿಂದಿನ ಚುನಾವಣೆಯಲ್ಲಿ ನೀಡಿದ್ದ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಸುಳ್ಳುಗಳನ್ನೇ ಹೇಳಿ ನಾಲ್ಕೂವರೆ ವರ್ಷ ಆಡಳಿತ ನಡೆಸಿದ್ದಾರೆ. ಅಭಿವೃದ್ಧಿ ಮಾತ್ತು ಆರ್ಥಿಕ ಸುಸ್ಥಿತಿಯನ್ನು ಹಾಳುಗೆಡವಿದ್ದಾರೆ. ಜಿಎಸ್‍ಟಿ, ನೋಟು ಅಮಾನಿಕರಣದಿಂದ ಜನರನ್ನು ಕಷ್ಟಕೆ ಸಿಲುಕಿಸಿದ್ದಾರೆ. ಯುವಕರಿಗೆ ಉದ್ಯೋಗ ನೀಡುವಲ್ಲಿ ವಿಫಲರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ರಾಹುಲ್‍ಗಾಂಧಿ ಅವರನ್ನು ಪ್ರಧಾನಿ ಮಾಡದೇ ಇದ್ದರೆ ದೇಶಕ್ಕೆ ಕಂಟಕ ಎದುರಾಗಲಿದೆ ಎಂದು ಪರಮೇಶ್ವರ್ ಆತಂಕ ವ್ಯಕ್ತಪಡಿಸಿದರು.

ಲಾಲ್‍ಬಹದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಮೂಲಕ ದೇಶದ ಆಹಾರ ಭದ್ರತೆ ಮತ್ತು ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಿದರು ಎಂದು ಹೇಳಿದರು.
ಸಣ್ಣ-ಪುಟ್ಟ ಅಸಮಧಾನಗಳು ಸಹಜ:
ಅನಿವಾರ್ಯ ಸಂದರ್ಭದಲ್ಲಿ ಸಮ್ಮಿಶ್ರ ಸರ್ಕಾರ ರಚಿಸಬೇಕಾಯಿತು. ಸಮ್ಮಿಶ್ರ ಸರ್ಕಾರ ನಡೆಸುವುದು ಕಷ್ಟದ ಕೆಲಸ. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಆದರೆ, ದೊಡ್ಡ ಪ್ರಮಾಣದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಸಹಿಸಿಕೊಳ್ಳಬೇಕಿದೆ ಎಂದರು.

2019ರಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ದೇಶದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ರಾಹುಲ್‍ಗಾಂಧಿ ಪ್ರಧಾನಿಯಾಗಬೇಕು. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೇ ನಾವು ಹಿಂದಿನ ಸಿದ್ದರಾಮಯ್ಯ ಸರ್ಕಾರದ ಎಲ್ಲಾ ಜನಪರ ಕಾರ್ಯಕ್ರಮಗಳು ಮುಂದುವರೆಯಬೇಕು. 2018-19ನೇ ಸಾಲಿನ ಬಜೆಟ್ ಜಾರಿಯಾಗಬೇಕು ಎಂಬ ಒಪ್ಪಂದವನ್ನು ಮಾಡಿಕೊಂಡೆವು. ಕಾಂಗ್ರೆಸ್ ಸಂಘಟನೆ ಬಲವಾಗಬೇಕಾದರೆ ಹಿಂದಿನ ಸರ್ಕಾರದ ಕಾರ್ಯಕ್ರಮಗಳು ನಮಗೆ ಅನಿವಾರ್ಯ ಎಂದು ಪರಮೇಶ್ವರ್ ತಿಳಿಸಿದರು.

ಇದೇ ಸಂದರ್ಭದಲ್ಲಿ ಮಹಾತ್ಮಗಾಂಧೀಜಿಯವರ 150ನೇ ವರ್ಷದ ಹುಟ್ಟುಹಬ್ಬವನ್ನು ವರ್ಷಪೂರ್ತಿ ಆಚರಿಸುವ ಆಚರಣೆಗೆ ಚಾಲನೆ ನೀಡಲಾಯಿತು.
ಹಾಗೆಯೇ ಜನ ಸಂಪರ್ಕ ಕಾರ್ಯಕ್ರಮದಲ್ಲಿ ಪ್ರತಿ ಕ್ಷೇತ್ರದಲ್ಲೂ ಬೂತ್ ಸಮಿತಿಗಳ ಮೂಲಕ ಜನರನ್ನು ಸಂಪರ್ಕಿಸಿ ಕಾಂಗ್ರೆಸ್ ಸಾಧನೆಗಳು ಮತ್ತು ಬಿಜೆಪಿ ವೈಫಲ್ಯಗಳನ್ನು ತಿಳಿಸುವ ಜನಸಂಪರ್ಕ ಅಭಿಯಾನಕ್ಕೆ ಹಾಗೂ ಆ ಮೂಲಕ ಪಕ್ಷಕ್ಕೆ ದೇಣಿಗೆ ಸಂಗ್ರಹಿಸುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅಭಿಯಾನದಲ್ಲಿ ಮಾರಾಟ ಮಾಡಲು 100, 500, 1000ರೂ. ಬೆಲೆಯ ಕೂಪನ್‍ಗಳನ್ನು ಬಿಡುಗಡೆ ಮಾಡಲಾಯಿತು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ, ಶಾಸಕರಾದ ರಾಮಲಿಂಗಾರೆಡ್ಡಿ, ರೋಷನ್‍ಬೇಗ್, ಎಚ್.ಎಂ.ರೇವಣ್ಣ, ವಿ.ಎಸ್.ಉಗ್ರಪ್ಪ, ಲಕ್ಷ್ಮೀಹೆಬ್ಬಾಳ್ಕರ್, ಸೌಮ್ಯರೆಡ್ಡಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದುದ್ದಕ್ಕೂ ದೇಶ ಭಕ್ತಿಗೀತೆಗಳ ಗಾಯನ ನಡೆಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ