ಕಿಸಾನ್ ಕ್ರಾಂತಿ: ಪ್ರತಿಭಟನಾ ನಿರತ ರೈತರ ಮೇಲೆ ಜಲಫಿರಂಗಿ ದಾಳಿ

ನವದೆಹಲಿ: ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಹಮ್ಮಿಕೊಂಡಿದ್ದ ಕಿಸಾನ್ ಕ್ರಾಂತಿ ಪಾದಯಾತ್ರೆಯನ್ನು ಪೊಲೀಸರು ತಡೆದಿದ್ದು, ರೈತರನ್ನು ಚದುರಿಸಲು ಜಲಫಿರಂಗಿ ಹಾಗೂ ಅಶ್ರುವಾಯು ಪ್ರಯೋಗ ನಡೆಸಿದ್ದಾರೆ.

ಉತ್ತಪ್ರದೇಶ, ಪಂಜಾಬ್ ಹಾಗೂ ಹರಿಯಾಣ ಸೇರಿದಂತೆ ವಿವಿಧ ರಾಜ್ಯಗಳಿಂದ ಸುಮಾರು 60 ಸಾವಿರಕ್ಕೂ ಹೆಚ್ಚು ರೈತರು ಕಿಸಾನ್ ಕ್ರಾಂತಿ ಪ್ರತಿಭಟನೆಯಲ್ಲಿ ಭಾಗವಿಸಿದ್ದು, ಟ್ರ್ಯಾಕ್ಟರ್, ಸೇರಿದಂತೆ ವಿವಿಧ ವಾಹನಗಳೊಂದಿಗೆ ರಾಜಧಾನಿ ದೆಹಲಿಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಬ್ಯಾರಿಕೇಡ್ ಗಳನ್ನು ಹಾಕಿ ತಡೆದ ಪೊಲೀಸರು ಪ್ರತಿಭಟನಾ ನಿರತ ರೈತರನ್ನು ನಿಯಂತ್ರಿಸಲು ಜಲಫಿರಂಗಿ ಪ್ರಯೋಗಮಾಡಿದ್ದಾರೆ.

ಇದರಿಂದ ರೊಚ್ಚಿಗೆದ್ದ ರೈತರು, ಜಲಫಿರಂಗಿಗೆ ಬಗ್ಗದೇ ಟ್ರಾಕ್ಟರ್, ಎತ್ತಿನಗಾಡಿಗಳ ಮೂಲಕ ಬ್ಯಾರಿಕೇಡ್ ಗಳನ್ನು ತಳ್ಳಿ ಒಳನುಗ್ಗಲು ಮುಂದಾಗಿದ್ದಾರೆ. ಅಂತಿಮವಾಗಿ ಪ್ರತಿಭಟನಾ ನಿರತ ರೈತರನ್ನು ದೆಹಲಿ ಪೊಲೀಸರು ತಡೆದಿದ್ದಾರೆ.

ರೈತರ ಪ್ರತಿಭಟನೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬೆಂಬಲ ನೀಡಿದ್ದು, ದೆಹಲಿ ಪ್ರವೇಶಿಸಲು ರೈತರಿಗೆ ಅವಕಾಶ ಮಾಡಿಕೊಡಬೇಕು. ಅವರನ್ನೇಕೆ ತಡೆಯಲಾಗುತ್ತಿದೆ ಎಂದು ಪ್ರಶ್ನಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ