ಬೆಂಗಳೂರು, ಅ.1- ಬಿಬಿಎಂಪಿ ಇಂಜಿನಿಯರ್‍ಗಳಿಗಿಂತ ಗಾರೆ ಕೆಲಸದವರು ಎಷ್ಟೋ ಮೇಲು ಎಂದು ನೂತನ ಮೇಯರ್ ಗಂಗಾಂಬಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪರಿ ಇದು.
ಕಚೇರಿಯಲ್ಲಿ ಪೂಜೆ ಸಲ್ಲಿಸಿ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಸ್ತೆ ಗುಂಡಿ ಮುಚ್ಚಿರುವ ಇವರ ಕೆಲಸ ನೋಡಿದರೆ ನನಗೆ ಬೇಜಾರಾಗುತ್ತೆ. ಕೂಡಲೇ ಸಮರ್ಪಕವಾಗಿ ಗುಣಮಟ್ಟದಿಂದ ರಸ್ತೆ ಗುಂಡಿಗಳನ್ನು ಮುಚ್ಚಬೇಕು. ನನ್ನ ಅವಧಿಯಲ್ಲಿ ಕಳಪೆ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದು ಖಡಕ್ ಸೂಚನೆ ನೀಡಿದರು.
ಅಧಿಕಾರಿಗಳು ವೈಜ್ಞಾನಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಿಲ್ಲ. ನಾನು ಮೊದಲು ಪರಿಶೀಲನೆ ಮಾಡುತ್ತೇನೆ. ಮತ್ತೆ ಕಳಪೆ ಕಾಮಗಾರಿಯಾಗಿದ್ದರೆ ಮತ್ತೆ ತೆರವುಗೊಳಿಸಿ ಪುನಃ ಮುಚ್ಚಿಸಲಾಗುವುದು. ನಮ್ಮ ಇಂಜಿನಿಯರ್‍ಗಳು ಕೇವಲ ಸರ್ಟಿಫಿಕೇಟ್ ತೆಗೆದುಕೊಂಡಿದ್ದಾರೆ ಅಷ್ಟೆ. ನಮ್ಮ ಗಾರೆ ಕೆಲಸದವರು ಇವರಿಗಿಂತ ಚೆನ್ನಾಗಿ ಕೆಲಸ ಮಾಡುತ್ತಾರೆ. ತ್ಯಾಜ್ಯ ವಿಚಾರವಾಗಿ ಹೊಸ ಟೆಂಡರ್ ಕರೆಯಬೇಕು. ಆ ಸಂಬಂಧಪಟ್ಟಂತೆ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಬ್ಲಾಕ್ ಸ್ಪಾಟ್ ಆಗಿರುವ ಕಡೆ ಗಮನ ಹರಿಸುತ್ತೇನೆ ಎಂದರು.
ನಾನು ಸ್ವಚ್ಛತೆಗೆ ಆದ್ಯತೆ ನೀಡುತ್ತೇನೆ. ಇದರ ಜತೆಗೆ ಪರಿಸರ ಸಂರಕ್ಷಣೆಗೂ ಹೆಚ್ಚು ಒತ್ತು ನೀಡುವ ಅಗತ್ಯವಿದೆ. ಇಂದು ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ಬೆಳಗ್ಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಗಿಡ ನೆಟ್ಟು ಬಂದಿದ್ದೇನೆ ಎಂದರು.
ಬಸವ ಧರ್ಮ ಪೀಠದ ಶ್ರೀಗಳ ಆಶೀರ್ವಾದ ಪಡೆದು ನಂತರ ಬಸವಣ್ಣನ ಪೂಜೆ ನೆರವೇರಿಸಿ ಆಸನ ಅಲಂಕರಿಸಿದರು.
ಆಡಳಿತ ಪಕ್ಷದ ನಾಯಕ ಎಂ.ಶಿವರಾಜು, ಪ್ರತಿಪಕ್ಷದ ನಾಯಕ ಪದ್ಮನಾಭ ರೆಡ್ಡಿ , ಜೆಡಿಎಸ್ ಗುಂಪಿನ ನಾಯಕ ನೇತ್ರಾ ನಾರಾಯಣ್ ಸೇರಿದಂತೆ ಪಕ್ಷಾತೀತವಾಗಿ ಸದಸ್ಯರು, ಮುಖಂಡರು ಶುಭ ಕೋರಿದರು.