ಬೆಂಗಳೂರು, ಅ.1-ಮಹದಾಯಿ, ಕಾವೇರಿ ಹೋರಾಟಗಾರರಿಗೆ ಸದ್ಯದಲ್ಲೇ ಸಿಹಿ ಸುದ್ದಿ ಸಿಗಲಿದೆ. ಮಹದಾಯಿ, ಕಾವೇರಿಗಾಗಿ ಹೋರಾಟ ನಡೆಸಿ ಬಂಧನಕ್ಕೊಳಗಾಗಿ ಪೆÇಲೀಸರಿಂದ ಕೇಸ್ಗಳನ್ನು ಹಾಕಿಸಿಕೊಂಡಿದ್ದ ನೂರಾರು ಹೋರಾಟರರ ಮೇಲಿದ್ದ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲು ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ನವೆಂಬರ್ 1 ರಂದು ಘೋಷಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕಾವೇರಿ ತೀರ್ಪು ಪ್ರಕಟವಾದ ಸಂದರ್ಭದಲ್ಲಿ ರೈತರು, ಕನ್ನಡಪರ ಹೋರಾಟಗಾರರು ಸೇರಿದಂತೆ ಸಾಕಷ್ಟು ಮುಖಂಡರು ರಾಜ್ಯಾದ್ಯಂತ ಬಂದ್ ಕರೆ ಕೊಟ್ಟು ಹೋರಾಟ ಮಾಡಿದ್ದರು. ಈ ಸಂದರ್ಭದಲ್ಲಿ ಹಲವರ ಮೇಲೆ ಪ್ರಕರಣ ದಾಖಲಾಗಿತ್ತು.
ಅದೇ ರೀತಿ ಎರಡು ವರ್ಷಗಳಿಂದ ಮಹದಾಯಿಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ನಿರಂತರ ಹೋರಾಟ ಮಾಡಿದ್ದರು. ಈ ಸಂದರ್ಭದಲ್ಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ನಡೆದಿತ್ತು. ಹಲವರು ಗಾಯಗೊಂಡಿದ್ದರು. ನೂರಾರು ಜನರನ್ನು ಬಂಧಿಸಲಾಗಿತ್ತು. ಹಲವರ ಮೇಲೆ ಮೊಕದ್ದಮೆಗಳು ದಾಖಲಾಗಿದ್ದವು.
ಕಾವೇರಿ, ಮಹದಾಯಿ ನೀರು ಹಂಚಿಕೆ ತೀರ್ಪು ಹೊರಬಿದ್ದಿದ್ದು, ಈಗ ಸರ್ಕಾರ ಹೋರಾಟಗಾರರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳಲು ತೀರ್ಮಾನಿಸಿದೆ.
ಎಲ್ಲಾ ಪ್ರಕರಣಗಳ ಬಗ್ಗೆ ಕೂಲಂಕಷ ಪರಿಶೀಲನೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದು, ನವೆಂಬರ್ 1 ರಂದು ಈ ಬಗ್ಗೆ ಘೋಷಣೆ ಮಾಡಲಿದೆ.