ನವದೆಹಲಿ: ಕರ್ನಾಟಕ ಜೀವ ರಕ್ಷಕರ ಕಾನೂನು ರಕ್ಷಣಾ ಮಸೂದೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.
ಈ ಮೂಲಕ ರಾಜ್ಯದಲ್ಲಿ ರಸ್ತೆ ಅಪಘಾತಕ್ಕೀಡಾದ ಗಾಯಾಳುಗಳನ್ನು ರಕ್ಷಿಸುವ ಜೀವರಕ್ಷಕರಿಗೆ ಇನ್ನು ಮುಂದೆ ಕಾನೂನಿನ ರಕ್ಷಣೆ ದೊರೆಯಲಿದೆ. ಜೀವರಕ್ಷಕರಿಗೆ ಕಾನೂನು ರಕ್ಷಣೆ ಒದಗಿಸಿದ ದೇಶದ ಮೊದಲ ರಾಜ್ಯ ಕರ್ನಾಟಕವಾಗಿದೆ.
ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆ ಹೆಚ್ಚುತ್ತಲಿದೆ. 2016 ರಲ್ಲಿ 1,50,785 ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಕರ್ನಾಟಕ ಜೀವ ರಕ್ಷಕರು ಹಾಗೂ ವೈದ್ಯಕೀಯ ವೃತ್ತಿಪರರಿಗೆ (ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ರಕ್ಷಣೆ ಮತ್ತು ನಿಯಂತ್ರಣ) ಮಸೂದೆ 2016ಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದಾರೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಮಸೂದೆಯಿಂದ ಯಾವುದೇ ಅಪಘಾತಕ್ಕೀಡಾದ ವ್ಯಕ್ತಿಯನ್ನು ತಕ್ಷಣ ಚಿಕಿತ್ಸೆಗೆ ದಾಖಲಿಸುವವರಿಗಾಗಲಿ, ಚಿಕಿತ್ಸೆ ನೀಡುವವರಿಗಾಗಲಿ ಪೋಲೀಸ್ ತನಿಖೆಯ ಭಯವಿರುವುದಿಲ್ಲ.