ಮುಜಾಫರ್ನಗರ: ಬಿಎಸ್ಎಫ್ ಯೋಧನನ್ನು ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಬರ್ಬರವಾಗಿ ಕೊಂದಿರುವುದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನಕ್ಕೆ ನಾವು ತಕ್ಕ ಉತ್ತರ ಕೊಟ್ಟಿದ್ದೇವೆ ಎಂದು ಗೃಹ ಸಚಿವ ರಾಜ್ನಾಥ್ ಸಿಂಗ್ ತಿಳಿಸಿದ್ದಾರೆ.
ಪಾಕ್ಗೆ ಕೊಟ್ಟಿರುವ ಆ ದೊಡ್ಡ ಹೊಡೆತದ ಬಗ್ಗೆ ನಾನು ಈಗಲೇ ಮಾತನಾಡುವುದಿಲ್ಲ. ಆದರೆ ಪಾಕ್ಗೆ ಮುಟ್ಟಿ ನೋಡಿಕೊಳ್ಳುವಂತೆ ಮಾಡಲಾಗಿದೆ ಎಂಬ ಅವರ ಹೇಳಿಕೆ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆಸಿರುವ ಬಗ್ಗೆ ಅನುಮಾನ ಮೂಡಿಸಿದೆ.
ನಮ್ಮ ಯೋಧರಿಗೆ ನಾನು ಹೇಳಿದ್ದೆ, ಅವರು ನಮ್ಮ ನೆರೆಹೊರೆಯವರು ಮೊದಲು ಗುಂಡು ಹಾರಿಸಬೇಡಿ. ಆದರೆ ಆ ಕಡೆಯಿಂದ ಒಂದು ಗುಂಡು ಇತ್ತ ಬಂದರೆ, ನೀವು ಹಾರಿಸುವ ಗುಂಡುಗಳಿಗೆ ಲೆಕ್ಕ ಇಡಬೇಡಿ. ಈಗ ಅವರಿಗೆ ಮುಟ್ಟಿ ನೋಡಿಕೊಳ್ಳುವಂತೆ ನಾವು ಪ್ರತ್ಯುತ್ತರ ಕೊಟ್ಟಿದ್ದೇವೆ. ಅದರ ಬಗ್ಗೆ ನಾನು ಈಗಲೇ ಹೇಳುವುದಿಲ್ಲ. ಇನ್ನು ಎರಡ್ಮೂರು ದಿನಗಳ ನಂತರ ಅದರ ಬಗ್ಗೆ ಮಾತನಾಡುತ್ತೇನೆ. ನನ್ನ ಮಾತಿನಲ್ಲಿ ವಿಶ್ವಾಸವಿಟ್ಟು, ಮುಂದೆ ನೋಡುತ್ತಿರಿ ಅವರ ಪರಿಸ್ಥಿತಿ ಏನಾಗುತ್ತದೆ ಎಂದಿದ್ದಾರೆ.
ಅಭಿ ಬಿ ಪಿಕ್ಚರ್ ಬಾಕಿ ಹೇ ಎಂಬ ಅರ್ಥದಲ್ಲಿ ಗೃಹಸಚಿವರು ನೀಡಿರುವ ಈ ಹೇಳಿಕೆ ಕುತೂಹಲ ಹುಟ್ಟಿಸಿದೆ. ಪಾಕ್ಗೆ ಭಾರತೀಯ ಸೇನೆ ನೀಡಿರುವ ಹೊಡೆತ ಏನು? ಈ ವಾರ ಮತ್ತೊಂದು ಸರ್ಜಿಕಲ್ ಸ್ಟ್ರೈಕ್ ನಡೆದಿದೆಯೇ ಎಂಬ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ.