ಬೆಂಗಳೂರು, ಸೆ.29- ಇ-ತ್ಯಾಜ್ಯ ವಿಲೇವಾರಿಯಲ್ಲಿ ದೇಶದ ಪ್ರಮುಖ ನಗರಗಳ ಪೈಕಿ ಬೆಂಗಳೂರು ಮತ್ತು ಹೈದ್ರಾಬಾದ್ ಮೊದಲ ಸ್ಥಾನದಲ್ಲಿವೆ.
ಇ-ತ್ಯಾಜ್ಯ ನಿರ್ವಹಣೆಯಲ್ಲಿ ಪ್ರಮುಖ ಸಂಸ್ಥೆಯಾಗಿರುವ ಸೆರೆಬ್ರ ಗ್ರೀನ್ ಸಂಸ್ಥೆ ಮತ್ತು ಎಂಎಐಟಿ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗಗೊಂಡಿದೆ. ಸಮರ್ಪಕವಾದ ರೀತಿಯಲ್ಲಿ ವಿಲೇವಾರಿ ಮಾಡುವ ಪರ್ಯಾಯ ಮಾರ್ಗಗಳಿಲ್ಲದ ಕಾರಣ ಭಾರತೀಯರು ಇ-ತ್ಯಾಜ್ಯವನ್ನು ಅಸಮರ್ಪಕ ರೀತಿಯಲ್ಲಿ ವಿಲೇವಾರಿ ಮಾಡುತ್ತಿದ್ದಾರೆ ಎಂಬ ಮಾಹಿತಿ ಈ ಸಮೀಕ್ಷೆಯಿಂದ ಗೊತ್ತಾಗಿದೆ.
ಇ-ತ್ಯಾಜ್ಯ ವಿಲೇವಾರಿಯಲ್ಲಿ ಬೆಂಗಳೂರು-ಹೈದ್ರಾಬಾದ್ ನಂತರದ ಸ್ಥಾನದಲ್ಲಿ ದೆಹಲಿ ಇದ್ದರೆ, ಬಳಕೆಯಾಗದ 5ಕ್ಕೂ ಹೆಚ್ಚು ಡಿವೈಸ್ಗಳನ್ನು ಇಟ್ಟುಕೊಂಡಿರುವವರ ಜನರಲ್ಲಿ ದೆಹಲಿ ಮುಂಚೂಣಿಯಲ್ಲಿದ್ದರೆ ಬೆಂಗಳೂರು, ಮುಂಬೈ ಮತ್ತು ಪುಣೆ ನಂತರದ ಸ್ಥಾನದಲ್ಲಿವೆ.
ಉಳಿದಂತೆ, ಭಾರತದಲ್ಲಿ ಶೇ. 80 ಜನರಿಗೆ ಇ-ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಗೊತ್ತಿಲ್ಲ.
ಕರ್ನಾಟಕದ ರಾಜಧಾನಿ ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ, ಹೈದ್ರಾಬಾದ್ ಮತ್ತು ಪುಣೆ ನಗರಗಳಲ್ಲಿ ಈ ಎರಡೂ ಸಂಸ್ಥೆಗಳು 600 ಜನರನ್ನು ಸಂದರ್ಶನ ಮಾಡಿ ಅವರಿಂದ ಇ-ತ್ಯಾಜ್ಯ ವಿಲೇವಾರಿ ಬಗ್ಗೆ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ವರದಿ ಸಿದ್ಧಪಡಿಸಿದೆ. ಈ ಮೂಲಕ ಜನರಲ್ಲಿ ಇ-ತ್ಯಾಜ್ಯ ಮತ್ತು ಅದರ ನಿರ್ವಹಣೆಯ ಬಗ್ಗೆ ಇರುವ ಅರಿವಿನ ಬಗ್ಗೆ ಮಾಹಿತಿ ಸಂಗ್ರಹಿಸಿದೆ. ಅಲ್ಲದೇ, ಇ-ತ್ಯಾಜ್ಯವನ್ನು ಅವರು ಯಾವ ರೀತಿಯಲ್ಲಿ ವಿಲೇವಾರಿ ಮಾಡುತ್ತಾರೆ ಮತ್ತು ಅಸಮರ್ಪಕ ವಿಲೇವಾರಿಗೆ ಕಾರಣಗಳೇನೆಂಬುದರ ಬಗ್ಗೆಯೂ ಮಾಹಿತಿಯನ್ನು ಕಲೆ ಹಾಕಿವೆ.
ಇವರಲ್ಲಿ ಶೇ.68 ಜನರು ಹೇಳುವಂತೆ ಸ್ಥಳೀಯ ಮಟ್ಟದಲ್ಲಿ ಇ-ತ್ಯಾಜ್ಯ ಸಂಗ್ರಹ ಮಾಡುವ ಸಂಸ್ಥೆಗಳು ಅಥವಾ ವ್ಯಕ್ತಿಗಳು ಇಲ್ಲ. ಇನ್ನು ಶೇ.72ರಷ್ಟು ಜನರು ಹೇಳುವ ಪ್ರಕಾರ ಸ್ಥಳೀಯ ತ್ಯಾಜ್ಯ ಸಂಗ್ರಹ ಮಾಡುವವರು ಇ-ತ್ಯಾಜ್ಯವನ್ನು ಸಂಗ್ರಹಿಸಲು ಹಿಂದೇಟು ಹಾಕುತ್ತಾರೆ. ಅಂದರೆ, ಇ-ತ್ಯಾಜ್ಯವನ್ನು ಸಂಗ್ರಹಿಸುವುದಿಲ್ಲ. ಈ ಹಿನ್ನೆಲೆಯಲ್ಲಿ ನಾವು ಆನ್ಲೈನ್ ಎಕ್ಸ್ಚೇಂಜ್ ಅಥವಾ ಸ್ಥಳೀಯ ಎಲೆಕ್ಟ್ರಾನಿಕ್ ಅಂಗಡಿಗಳಲ್ಲಿ ಹಳೆಯ ಡಿವೈಸ್ಗಳನ್ನು ಕೊಟ್ಟು ಹೊಸ ಡಿವೈಸ್ಗಳನ್ನು ಖರೀದಿಸುತ್ತೇವೆ ಎನ್ನುತ್ತಾರೆ ಶೇ.90ರಷ್ಟು ಜನರು. ಇನ್ನು ಶೇ.50ರಷ್ಟು ಜನರ ಬಳಿ 2 ಅಥವಾ ಅದಕ್ಕಿಂತ ಹೆಚ್ಚು ಡಿವೈಸ್ಗಳಿವೆ. ಆದರೆ, ಅವು ಬಳಕೆಯಾಗುತ್ತಿಲ್ಲ. ಸಮರ್ಪಕ ವಿಲೇವಾರಿ ಸಾಧ್ಯವಾಗದ ಹಿನ್ನೆಲೆಯಲ್ಲಿ 5 ವರ್ಷಗಳವರೆಗೆ ನಮ್ಮಲ್ಲಿಯೇ ಇಟ್ಟುಕೊಳ್ಳುತ್ತೇವೆ ಎಂದಿದ್ದಾರೆ.
ಈ ಬಗ್ಗೆ ಮಾತನಾಡಿದ ಸೆರೆಬ್ರ ಇಂಟಗ್ರೇಟೆಡ್ ಟೆಕ್ನಾಲಜಿಸ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಂಸ್ಥಾಪಕರಾದ ವಿ.ರಂಗನಾಥನ್, ಇ-ತ್ಯಾಜ್ಯದ ಬಗ್ಗೆ ಜಾಗೃತಿ ಮೂಡಿಸುವುದು ದೇಶದ ಅತ್ಯಗತ್ಯವಾಗಿರುವ ಅಂಶವಾಗಿದೆ. ಈ ಅರಿವು ಹೊಂದುವುದರಲ್ಲಿ ಸಾರ್ವಜನಿಕರು ಈಗಾಗಲೇ ಮುನ್ನಡಿ ಇಟ್ಟಿದ್ದಾರೆ. ಈ ಅರಿವು ಮೂಡಿಸುವ ಅಭಿಯಾನವನ್ನು ಮತ್ತಷ್ಟು ಚುರುಕುಗೊಳಿಸಿ ಭಾರತೀಯರಲ್ಲಿ ಇ-ತ್ಯಾಜ್ಯದ ಸಮರ್ಪಕ ವಿಲೇವಾರಿ ಬಗ್ಗೆ ಮತ್ತಷ್ಟು ಜ್ಞಾನಾರ್ಜನೆ ಮಾಡುವ ನಿಟ್ಟಿನಲ್ಲಿ ನಾವು ಹೆಜ್ಜೆ ಇಟ್ಟಿದ್ದೇವೆ. ಈ ದಿಸೆಯಲ್ಲಿ ನಾವು ಎಂಎಐಟಿ ಸಹಯೋಗವನ್ನು ಪಡೆದುಕೊಂಡಿದ್ದು ಜಂಟಿ ಸಹಯೋಗದಲ್ಲಿ ಅಭಿಯಾನವನ್ನು ಯಶಸ್ಸುಗೊಳಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.