ಬೆಂಗಳೂರು,ಸೆ.29- ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ನಾಳೆ ಚುನಾವಣೆ ನಡೆಯುತ್ತಿದೆ.
ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿರುವ ಡಾ.ರಾಜ್ಕುಮಾರ್ ಗಾಜಿನ ಮನೆಯಲ್ಲಿ ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಚುನಾವಣೆ ನಡೆಯಲಿದ್ದು, ಸಂಘದ ಸದಸ್ಯತ್ವ ಹೊಂದಿರುವ ಸದಸ್ಯರು ಮತದಾನ ಮಾಡಬಹುದಾಗಿದೆ.
ಸಂಘದ 17 ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದ್ದು, ಅಮೃತರಾಜ್ ಮತ್ತು ಮಲ್ಲಪ್ಪ ನೇತೃತ್ವದ 26 ಸದಸ್ಯರು ಚುನಾವಣಾ ಕಣದಲ್ಲಿದ್ದು, ಸದಸ್ಯರು 17 ನಿರ್ದೇಶಕರ ಸ್ಥಾನಗಳಿಗೆ ಮತ ಚಲಾಯಿಸಬಹುದಾಗಿದೆ.
ಈ ಹಿಂದೆ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘ ಹಾಗೂ ಪೌರಕಾರ್ಮಿಕ ಗ್ಯಾಂಗ್ಮ್ಯಾನ್ ಸಂಘ ಮಾತ್ರ ಇರಬೇಕು ಎಂದು ಕೌನ್ಸಿಲ್ನಲ್ಲಿ ನಿರ್ಣಯ ತೆಗೆದುಕೊಂಡ ನಂತರ ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಸಂಘಕ್ಕೆ ಚುನಾವಣೆ ನಡೆದಿತ್ತು.
ಸಂಘದ ಚುನಾವಣೆ ಪೂರ್ಣಗೊಂಡ ನಂತರ ಮತ್ತೊಮ್ಮೆ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ನಂತರ ಸಿಬ್ಬಂದಿಯೊಬ್ಬರು ಕೌನ್ಸಿಲ್ ನಿರ್ಣಯದ ಪ್ರಕಾರ ಆಯುಕ್ತರಿಗೆ ಚುನಾವಣೆ ನಡೆಸಲು ಅಧಿಕಾರ ಇಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ ಪರಿಣಾಮ ನ್ಯಾಯಾಲಯ ಚುನಾವಣೆಯನ್ನು ರದ್ದುಗೊಳಿಸಿತ್ತು.
ಸಹಕಾರ ಸಂಘಗಳ ಇಲಾಖೆಗೆ ಮಾತ್ರ ಚುನಾವಣೆ ನಡೆಸಲು ಅಧಿಕಾರ ಇದೆ ಎಂಬ ಆದೇಶದ ಮೇರೆಗೆ ಸಹಕಾರ ಇಲಾಖೆಯಲ್ಲಿ ನೋಂದಾಯಿಸಿಕೊಂಡಿರುವ ಬಿಬಿಎಂಪಿ ಅಧಿಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘಕ್ಕೆ ನಾಳೆ ಚುನಾವಣೆ ನಡೆಯುತ್ತಿದೆ.
ಈಗಾಗಲೇ ಹಲವಾರು ಸಿಬ್ಬಂದಿಗಳ ಸಮಸ್ಯೆಗಳನ್ನು ಬಗೆಹರಿಸಲಾಗಿದ್ದು, ಮುಂದೆ ನೌಕರರ ಕಷ್ಟಸುಖಗಳಿಗೆ ಸ್ಪಂದಿಸಬೇಕೆಂಬ ಉದ್ದೇಶದಿಂದ ಕ್ಷೇಮಾಭಿವೃದ್ಧಿ ಸಂಘಕ್ಕೆ ಚುನಾವಣೆ ನಡೆಯುತ್ತಿದ್ದು, ನೋಂದಾಯಿತ ಸದಸ್ಯರು ನಾಳೆ ಗುರುತಿನ ಚೀಟಿಯೊಂದಿಗೆ ಆಗಮಿಸಿ ಮತದಾನದಲ್ಲಿ ಪಾಲ್ಗೊಳ್ಳುವಂತೆ ಅಮೃತರಾಜ್ ಮನವಿ ಮಾಡಿಕೊಂಡಿದ್ದಾರೆ.
ಸದಸ್ಯರು ನನ್ನ ನೇತೃತ್ವದ ತಂಡಕ್ಕೆ ಮತ ನೀಡಿ ಗೆಲ್ಲಿಸಿದರೆ ಬಿಬಿಎಂಪಿಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಮುಂಬಡ್ತಿ ಮೂಲಕ ತುಂಬಲು ಕ್ರಮ ವಹಿಸಲಾಗುವುದು. 45 ವರ್ಷ ಮೇಲ್ಪಟ್ಟ ಸಿಬ್ಬಂದಿಗಳಿಗೆ ಉಚಿತವಾಗಿ ಅಪೆÇೀಲೋ ಇನ್ಸುರೆನ್ಸ್ ಮಾಡಿಸುವುದರ ಜೊತೆಗೆ ಎರವಲು ಸೇವೆ ಅಧಿಕಾರಿಗಳ ಹುದ್ದೆಗೆ ಕಡಿವಾಣ ಹಾಕಲಾಗುವುದು ಎಂದು ಅವರು ಭರವಸೆ ನೀಡಿದರು.