ಬೆಂಗಳೂರು, ಸೆ.29-ಇತ್ತ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಬಾಂಧವ್ಯ ಮುಂದುವರೆದ ಬೆನ್ನಲ್ಲೇ ಅತ್ತ ಹಾಸನದಲ್ಲಿ ದೋಸ್ತಿ ಪಕ್ಷಗಳ ನಡುವೆ ಕುಸ್ತಿ ಜೋರಾಗಿದೆ.
ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧಿಕಾರ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್-ಜೆಡಿಎಸ್ ಮುಖಂಡರ ನಡುವೆ ಫೈಟ್ ಜೋರಾಗಿಯೇ ನಡೆದಿದೆ.
ಇದಿಷ್ಟೇ ಅಲ್ಲದೆ, ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದರೂ ಜಿಲ್ಲೆಯಲ್ಲಿ ಕಾಂಗ್ರೆಸ್ನ್ನು ಸಂಪೂರ್ಣವಾಗಿ ಕಡೆಗಣಿಸಲಾಗುತ್ತಿದೆ. ಅನುದಾನ ಹಂಚಿಕೆಯಲ್ಲಿ ತಾರತಮ್ಯ, ಮಾಡಲಾಗುತ್ತಿದೆ. ಕಾಂಗ್ರೆಸ್ ಕಾರ್ಯಕರ್ತರನ್ನು ಎರಡನೇ ದರ್ಜೆ ನಾಗರಿಕರಂತೆ ನೋಡಲಾಗುತ್ತಿದೆ. ಇದೇ ರೀತಿ ಮುಂದುವರೆದರೆ ಪಕ್ಷ ಜಿಲ್ಲೆಯಲ್ಲಿ ನಾಶವಾಗುತ್ತದೆ ಎಂದು ಜಿಲ್ಲೆಯ ಹಲವು ಕಾಂಗ್ರೆಸ್ ಮುಖಂಡರು, ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂತಾದವರಿಗೆ ದೂರು ನೀಡಿದ್ದಾರೆ.
ಬೆಳಗಾವಿ ಕಾಂಗ್ರೆಸ್ನಲ್ಲಿ ಭಿನ್ನಮತ ಉಲ್ಭಣಗೊಂಡು ಅದನ್ನು ಬಗೆಹರಿಸುವುದರಲ್ಲೇ ಹೈಕಮಾಂಡ್ ನಾಯಕರು ಹೈರಾಣಾಗಿದ್ದರು.ಈಗ ಹಾಸನ ಕಾಂಗ್ರೆಸ್ ದೋಸ್ತಿ ಪಕ್ಷಗಳ ನಡುವೆ ಕುಸ್ತಿ ಪ್ರಾರಂಭವಾಗಿದೆ. ಜೆಡಿಎಸ್ ನಾಯಕರ ಧೋರಣೆ ವಿರುದ್ಧ ಅಲ್ಲಿನ ಕಾಂಗ್ರೆಸ್ನ ಮುಖಂಡರು ಹೈಕಮಾಂಡ್ಗೆ ದೂರು ನೀಡಿ ಮಧ್ಯಪ್ರವೇಶಕ್ಕೆ ಆಗ್ರಹಿಸಿದ್ದಾರೆ.
ಜಿ.ಪಂ. ಅನುದಾನ, ಅಧಿಕಾರ ಹಂಚಿಕೆ, ವರ್ಗಾವಣೆ ಯಾವ ವಿಷಯದಲ್ಲೂ ಕಾಂಗ್ರೆಸ್ ಪಕ್ಷವನ್ನು ಪರಿಗಣಿಸುತ್ತಿಲ್ಲ ಎಂದು ಇಲ್ಲಿನ ಕಾಂಗ್ರೆಸ್ನ ನಾಯಕರು ತಮ್ಮ ಅಳಲು ತೋಡಿಕೊಂಡು ದೂರು ನೀಡಿದ್ದಾರೆ.
ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಆಡಳಿತವಿದೆ. ಯಾವುದೇ ಮುಖಂಡರು ಬಹಿರಂಗ ಹೇಳಿಕೆ ನೀಡುವುದು ಬೇಡ. ಇದರಿಂದ ಮುಜುಗರ ಉಂಟಾಗುತ್ತದೆ ಎಂದು ಮುಖಂಡರು ಸೂಚನೆ ನೀಡಿದ ಬೆನ್ನಲ್ಲೇ ಹಲವರು ದೂರು ನೀಡಿದ್ದಾರೆ. ಕಾಂಗ್ರೆಸ್ನ ಮುಖಂಡರು ಯಾವ ಕ್ರಮಕೈಗೊಳ್ಳಲಿದ್ದಾರೆ ಎಂಬುದನ್ನು ಕಾದುನೋಡಬೇಕು.