ಬೆಂಗಳೂರು, ಸೆ.29- ಬಿಜೆಪಿಯವರು ನಡೆಸುವ ಆಪರೇಷನ್ ಕಮಲದಲ್ಲಿ ಎಷ್ಟರ ಮಟ್ಟಿಗೆ ಸಫಲರಾಗುತ್ತಾರೋ ನೋಡೋಣ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ವ್ಯಂಗ್ಯವಾಡಿದರು.
ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆ ಸಂದರ್ಭದಲ್ಲಿ ನಡೆದ ಆಪರೇಷನ್ ಕಮಲದ ಯತ್ನದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ 2008ರಲ್ಲಿ ಆಪರೇಷನ್ ಕಮಲ ಪ್ರಾರಂಭವಾಗಿತ್ತು. ಅದು ಇನ್ನೂ ಮುಂದುವರಿದಿದೆ. ಅದರಲ್ಲಿ ಎಷ್ಟರಮಟ್ಟಿಗೆ ಸಫಲರಾಗುತ್ತಾರೋ ನೋಡಬೇಕು ಎಂದು ಹೇಳಿದರು.
ಬಿಬಿಎಂಪಿ ಮೇಯರ್-ಉಪಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ತಾವು ಗಮನ ಕೊಟ್ಟಿರಲಿಲ್ಲ. ಪಕ್ಷದ ವಿರುದ್ಧ ಇರುವವರ ಮೇಲೆ ಪಕ್ಷವೇ ಕ್ರಮ ಕೈಗೊಳ್ಳುತ್ತದೆ ಎಂದು ಮಾರ್ಮಿಕವಾಗಿ ಅವರು ನುಡಿದರು.
ಅಯ್ಯಪ್ಪಸ್ವಾಮಿ ದರ್ಶನಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇಷ್ಟ ಇರುವವರು ದೇವರ ದರ್ಶನಕ್ಕೆ ಹೋಗುತ್ತಾರೆ. ನಂಬಿಕೆ ಇಲ್ಲದವರು ಹೋಗುವುದಿಲ್ಲ. ಮಹಿಳೆಯರಿಗೆ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಅವಕಾಶ ಕೊಡಬೇಕೆಂದು ಹೋರಾಟ ಕೂಡ ನಡೆದಿತ್ತು ಎಂದು ಹೇಳಿದರು.