ಹದಗೆಟ್ಟಿರುವ ರಾಜಕೀಯ ವ್ಯವಸ್ಥೆ ಸರಿಪಡಿಸುವುದು ಕಷ್ಟ: ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು,ಸೆ.29- ಹದಗೆಟ್ಟಿರುವ ರಾಜಕೀಯ ವ್ಯವಸ್ಥೆಯನ್ನು ಸರಿಪಡಿಸುವುದು ಕಷ್ಟ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಅಭಿಪ್ರಾಯಪಟ್ಟರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಅವರ ಕೃತಿ ಅಥೆನ್ಸ್ ರಾಜ್ಯಾಡಳಿತ ಎಂಬ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ರಾಜಕೀಯ ವ್ಯವಸ್ಥೆ ಸಾಕಷ್ಟು ಹದಗೆಟ್ಟಿದೆ. ವಿಶ್ವನಾಥ್ ಅವರ ಅಥೆನ್ಸ್‍ನ ರಾಜ್ಯಾಡಳಿತ ಕೃತಿ ಪ್ರಸ್ತುತ ರಾಜಕಾರಣದಲ್ಲಿ ಸ್ವಲ್ಪ ಮಟ್ಟಿನ ಮಾರ್ಪಾಡು ತರಬಹುದು ಎಂದು ವ್ಯಾಖ್ಯಾನಿಸಿದರು.

ಸ್ವಾತಂತ್ರ್ಯ ಬಂದ ಹೊಸದರಲ್ಲಿ ನಮ್ಮಲ್ಲೂ ಪ್ರಜಾಪ್ರಭುತ್ವದ ಬಗ್ಗೆ ಪವಿತ್ರ ಭಾವನೆ ಇತ್ತು. ಮತದಾನಕ್ಕೂ ಮುನ್ನ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮಹಾತ್ಮಗಾಂಧಿ, ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರಂತಹ ಫೆÇೀಟೊಗಳನ್ನು ಹಿಡಿದು ಸಾಲಾಗಿ ಮತಗಟ್ಟೆಗೆ ಹೋಗುತ್ತಿದ್ದವರನ್ನು ತಾವು ಕಣ್ಣಾರೆ ನೋಡಿದ್ದೇನೆ ಎಂದರು. ಹಿಂದೆ ಅಥೆನ್ಸ್‍ಗೆ ಪ್ರವಾಸ ಹೋಗಿದ್ದೆ. ಅಥೆನ್ಸ್ ನಗರ ಸುಂದರವಾಗಿದೆ. ನಿರ್ಭೀತಿಯಿಂದ ಓಡಾಡುವ ವಾತಾವರಣವಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮೊದಲಿಗೆ ತೋರಿಸಿದ ದೇಶ ಅದು ಎಂದ ಅವರು, ಸರಿಪಡಿಸಲಾಗದಷ್ಟು ರಾಜಕೀಯ ವ್ಯವಸ್ಥೆ ಇಂದು ಕುಸಿದು ಹೋಗಿದೆ. ಇಂತಹ ಕೃತಿಗಳಿಂದ ಸ್ವಲ್ಪ ಮಟ್ಟಿನ ಸುಧಾರಣೆಗೆ ಕಾರಣವಾಗಬಹುದು ಎಂದು ಹೇಳಿದರು.
ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗಡೆ ಮಾತನಾಡಿ, 2000 ವರ್ಷಗಳಿಗೂ ಮುನ್ನ ಗ್ರೀಸ್‍ನಲ್ಲಿ ಪ್ರಜಾಪ್ರಭುತ್ವ ಜಾರಿಯಾಗಿತ್ತು. ಅದು ಇತರೆ ದೇಶಗಳಿಗೂ ಮಾದರಿಯಾಗಿದೆ.

ಗ್ರೀಸ್‍ನ ರಾಜಕೀಯ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಜನರಿಂದ ಜನರಿಗಾಗಿ, ಜನರ ಸರ್ಕಾರ ಇರಬೇಕು. ಪ್ರಜಾಪ್ರಭುತ್ವ ಯಾವುದೇ ಒಂದು ಗುಂಪಿಗೆ ಸೀಮಿತವಲ್ಲ. ಪ್ರಜಾಪ್ರಭುತ್ವದ ಮೂಲ ತತ್ವ ಉಳಿಸುವ ಚರ್ಚೆಗಳು ವಿಧಾನಸಭೆಗಳಲ್ಲಿ ನಡೆಯಬೇಕೆಂದು ಹೇಳಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಮಾತನಾಡಿ, ಅಥೆನ್ಸ್‍ನಲ್ಲಿ 20 ದಿನಗಳ ಕಾಲ ಉಳಿದು ಅಧ್ಯಯನ ಮಾಡಿ ಕೃತಿ ರಚಿಸಿದ್ದೇನೆ. ಈ ಕೃತಿ ಅಲ್ಲಿನ ಪಾರ್ಲಿಮೆಂಟ್‍ಗೂ ಸಲ್ಲಿಕೆಯಾಗಲಿದೆ. 2000 ವರ್ಷಗಳ ಹಿಂದೆ ಜನರಿಂದ ಜನರಿಗಾಗಿ ಚುನಾವಣೆ , ಆಡಳಿತ ಇರಬೇಕೆಂಬುದನ್ನು ಮನಗಂಡು ಅಲ್ಲಿ ಜಾರಿಗೆ ತರಲಾಗಿತ್ತು. ಗ್ರೀಸ್‍ನಲ್ಲಿ ಜನತಂತ್ರ ವ್ಯವಸ್ಥೆಗೆ ಮೊದಲಿಗೆ ಚುನಾವಣೆ ಪ್ರಾರಂಭವಾಯಿತು.

ಜಗತ್ತಿನ ಅಪ್ರತಿಮ ಸುಂದನಗರ ಅಥೆನ್ಸ್. ಇದು ಚಿಂತನಶೀಲರಿರುವ ದೇಶ. ಅಲ್ಲೂ ನಮಗಿಂತಲೂ ಹೆಚ್ಚು ಮೂಢನಂಬಿಕೆಗಳಿವೆ. ಲಕ್ಷ್ಮಿ ಸ್ವರೂಪವೆಂದು ಗೂಬೆಯನ್ನು ಪೂಜಿಸುತ್ತಾರೆ. ಜಗತ್ತಿನ ಹಲವು ಪ್ರಥಮಗಳಿಗೆ ಗ್ರೀಸ್ ಕಾರಣವಾಗಿದೆ. ಕಲೆ, ಸಂಸ್ಕøತಿ, ಶಿಕ್ಷಣ, ರಾಜಕಾರಣ ಮೇಳೈಸಿದ ಅಥೆನ್ಸ್‍ನಲ್ಲಿ 10 ವರ್ಷಗಳ ಹಿಂದೆ ನೋಟು ಅಮಾನೀಕರಣ ಮಾಡಿ ಸಂಕಷ್ಟಕ್ಕೆ ಸಿಲುಕಿದೆ ಎಂದು ಹೇಳಿದರು.
ರಾಜಕಾರಣದ ಮಹಾ ಪ್ರವಾಹದಲ್ಲಿ ನಾವೊಂದು ಹುಲ್ಲು ಕಡ್ಡಿ ಮಾತ್ರ ಅಥೆನ್ಸ್‍ನಲ್ಲಿ ಚುನಾವಣೆ ಹಿಂದಿನ ದಿನ ಉಪವಾಸವಿರುತ್ತಾರೆ. ಮತದಾನಕ್ಕೆ ಪವಿತ್ರ ಸ್ಥಾನ ಕೊಟ್ಟಿದ್ದಾರೆ ಎಂದು ವಿವರಿಸಿದರು.

ಕನ್ನಡ ಸಾಹಿತ್ಯ ಪರಿಷತ್‍ಗೆ ರಾಜಕಾರಣಿಗಳು ಬರೆದ ಪುಸ್ತಕದ ಮೇಲೆ ಅಭಿಮಾನವಿಲ್ಲ. ಬೇರೆ ಬೇರೆ ವಿಷಯಗಳಿಗೆ ಸಂಬಂಧಿಸಿದಂತೆ 7 ಪುಸ್ತಕಗಳನ್ನು ಹಾಗೂ ಪ್ರಚಲಿತ ವಿಷಯಗಳ ಕುರಿತಂತೆ ಕೆಲ ಪುಸ್ತಕವನ್ನು ಬರೆದಿದ್ದೇನೆ. ಆದರೂ ಕಥೆ, ಕಾದಂಬರಿ ಬರೆದಿಲ್ಲ ಎಂದು ತಿಳಿಸಿದರು.
ಪತ್ರಕರ್ತ ಬಿ.ಎಂ.ಹನೀಫ್ ಮಾತನಾಡಿ, ಈ ರಾಷ್ಟ್ರದ ಎಲ್ಲ ಶಾಸಕರು ಓದಬೇಕಾದ ಪುಸ್ತಕ ಇದು. ಪ್ರಜಾಪ್ರಭುತ್ವಕ್ಕೆ ತಳಹದಿ ಹಾಕಿದ ದೇಶದ ವಿಚಾರಗಳಿವೆ. ಶಾಸಕರು ಸಹ ಯುದ್ಧ ಮಾಡಬೇಕಿತ್ತು. ಅಸಂಸದೀಯ ಪದ ಬಳಸಿದ ಶಾಸಕರನ್ನು ಅವರ ಸ್ಥಾನದಿಂದ ಅನರ್ಹಗೊಳಿಸಲಾಗುತ್ತಿತ್ತು. ಸ್ತ್ರೀಯರಿಗೆ ನಾಗರಿಕ ಹಕ್ಕು ಇರಲಿಲ್ಲ ಎಂಬ ಹಲವಾರು ವಿಷಯಗಳನ್ನು ವಿಶ್ವನಾಥ್ ಅವರು ಗಮನಿಸಿದ್ದಾರೆ. ಕೃತಿಯಲ್ಲಿ ಅತಿಶಯೋಕ್ತಿ ಇಲ್ಲ. ಕೃತಿಯ ಕರ್ತೃ ಚಿಂತನಶೀಲರು ಎಂದು ಹೇಳಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ದೇವರಾಜ ಅರಸು, ಎಂ.ಪಿ.ಪ್ರಕಾಶ್, ರಮೇಶ್‍ಕುಮಾರ್ ಅವರು ರಾಜಕಾರಣಿಯಾಗಿದ್ದರೂ ಸಹ ಓದುಗರಾಗಿದ್ದಾರೆ ಎಂದು ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ