ನವದೆಹಲಿ: 19ನೇ ಇಂಡೋ-ರಷ್ಯನ್ ಶೃಂಗಸಭೆ ಹಿನ್ನಲೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅಕ್ಟೋಬರ್ 4-5 ರಂದು ಭಾರತಕ್ಕೆ ಭೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಪುಟಿನ್ ನಡುವೆ ಮಹತ್ವದ ಮಾತುಕತೆ ನಡೆಯಲಿದೆ.
ಕಳೆದ ಬಾರಿಯ ಶೃಂಗಸಭೆ 2017ರಲ್ಲಿ ಸೆಂಟ್ ಪೀಟರ್ ಬರ್ಗ್ ನಲ್ಲಿ ನಡೆದಿತ್ತು. ಕಳೆದ ಮೇ ತಿಂಗಳಿನಲ್ಲಿ ಮೋದಿ ಹಾಗೂ ಪುಟಿನ್ ಅವರು ಸೋಚಿಯಲ್ಲಿ ನಡೆದ ಅನೌಪಚಾರಿಕ ಶೃಂಗಸಭೆಯಲ್ಲಿ ಮಾತುಕತೆ ನಡೆಸಿದ್ದರು. ಇದೀಗ 19ನೇ ಇಂಡೋ-ರಷ್ಯನ್ ಶೃಂಗಸಭೆ ಅ.4-5 ರಂದು ನಡೆಯಲಿದ್ದು, ಶೃಂಗಸಭೆ ಹಿನ್ನಲೆಯಲ್ಲಿ ಪುಟಿನ್ ಅವರು ರಾಜಧಾನಿ ದೆಹಲಿಗೆ ಆಗಮಿಸುತ್ತಿದ್ದಾರೆ.
ಪುಟಿನ್ ಭಾರತಕ್ಕೆ ಆಗಮಿಸುತ್ತಿರುವ ಬೆನ್ನಲ್ಲೇ ಅಮೆರಿಕಾದಿಂದ ನಿರ್ಬಂಧ ಹೇರಿಕೆ ಆತಂಕದ ನಡುವಲ್ಲೇ ರಷ್ಯಾದಿಂದ ಆತ್ಯಾಧುನಿಕ ಕ್ಷಿಪಣಿ ನಿರೋಧಕ ವ್ಯವಸ್ಥೆ ಎಸ್-400 ಖರೀದಿಗೆ ಸಂಪುಟ ಸಮಿತಿ ಒಪ್ಪಿದೆ ನೀಡಿದೆ.
ಸಂಪುಟ ಸಮಿತಿ ಒಪ್ಪಿಗೆ ನೀಡಿರುವ ಹಿನ್ನಲೆಯಲ್ಲಿ ಎಸ್-400 ಖರೀದಿ ಮಾಡುವ ಕುರಿತ ಒಪ್ಪಂದಕ್ಕೆ ಸಹಿ ಹಾಕಿದ 24 ತಿಂಗಳ ಬಳಿಕ ಮೊದಲ ಎಸ್-400 ಭಾರತಕ್ಕೆ ಆಗಮಿಸಲಿದೆ. ಇನ್ನುಳಿದ ವಾಯು ರಕ್ಷಣಾ ಕ್ಷಿಪಣಿಗಳು ಮುಂದಿನ 4-5 ವರ್ಷಗಳ ಬಳಿಕ ಭಾರತವನ್ನು ತಲುಪಲಿವೆ ಎಂದು ಹೇಳಲಾಗುತ್ತಿದೆ.
400 ಕಿ.ಮೀ. ದೂರದಲ್ಲಿರುವ ಮತ್ತು 30 ಕಿ.ಮೀ ಎತ್ತರದಿಂದ ದಾಳಿಗೆ ಚಿಮ್ಮಿಬರುತ್ತಿರುವ ಶತ್ರುಪಡೆಯ ಬಾಂಬರ್ಗಳು, ಯುದ್ಧವಿಮಾನ, ಕ್ಷಿಪಣಿ, ಡ್ರೋನ್, ಗೂಢಚರ್ಯು ವಸ್ತುಗಳನ್ನು ಹೊಡೆದುರುಳಿಸಬಲ್ಲ ಶಕ್ತಿ ಎಸ್- 400ಗೆ ಇದೆ. ಜತೆಗೆ ಆಧುನಿಕ ರೆಡಾರ್ಗಳ ಸಹಾಯದಿಂದ ತನ್ನ ರಕ್ಷಣೆಯನ್ನು ಕೂಡ ಮಾಡಿಕೊಳ್ಳಬಲ್ಲ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗಿದೆ.