
ನವದೆಹಲಿ: 2018ನೇ ಸಾಲಿನ ಆಸ್ಕರ್ ಪ್ರಶಸ್ತಿ ರೇಸ್ ಗೆ ಭಾರತದಿಂದ ಅಧಿಕೃತವಾಗಿ ಅಸ್ಸಾಮಿನ ವಿಲೇಜ್ ರಾಕ್ ಸ್ಟಾರ್ಸ್ ಚಿತ್ರವನ್ನು ಅಧಿಕೃತನವಾಗಿ ಆಯ್ಕೆ ಮಾಡಲಾಗಿದೆ ಎಂದು ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಅಧಿಕೃತವಾಗಿ ಘೋಷಣೆ ಮಾಡಿದೆ.
ಶುಕ್ರವಾರ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಗಿದ್ದು, ಹಳ್ಳಿ ಸೊಗಡಿನ ಕಥಾಹಂದರವನ್ನು ಹೊಂದಿರುವ ವಿಲೇಜ್ ರಾಕ್ ಸ್ಟಾರ್ಸ್ ಚಿತ್ರವನ್ನು ಆಸ್ಕರ್ ಪ್ರಶಸ್ತಿ ರೇಸ್ ಗೆ ಇದೀಗ ನಾಮ ನಿರ್ದೇಶನ ಮಾಡಲು ಅಂತಿಮ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ವಿಲೇಜ್ ರಾಕ್ ಸ್ಟಾರ್ಸ್ ಚಿತ್ರ ಅಸ್ಸಾಮಿನ ಚಿತ್ರವಾಗಿದ್ದು. ಚಿತ್ರವನ್ನು ರಿಮಾ ದಾಸ್ ಅವರು ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ನಿರ್ದೇಶಕರಾದ ರಿಮಾದಾಸ್ ಮತ್ತು ಜಯಾದಾಸ್ ಬಂಡವಾಳ ಹೂಡಿದ್ದು, ಫ್ಲೈಯಿಂಗ್ ರಿವರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರದವನ್ನು ಹಂಚಿಕೆ ಮಾಡಲಾಗಿದೆ. ವಿಲ್ಲೇಜ್ ರಾಕ್ ಸ್ಟಾರ್ಸ್ ಚಿತ್ರ ಈಗಾಗಲೇ ಹತ್ತು ಹಲವು ಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡಿದ್ದು, ಹಲವಾರು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.
ಇತ್ತೀಚೆಗೆ ನಡೆದ 2017ನೇ ಸಾಲಿನ ಟೊರಾಂಟೋ ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿದ್ದ ಈ ಚಿತ್ರ ಅತ್ಯುತ್ತಮ ಪ್ರಾದೇಶಿಕ ಚಿತ್ರ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಅಂತೆಯೇ 65ನೇ ರಾಷ್ಟ್ರೀಯ ಚಲನ ಚಿತ್ರೋತ್ಸವ ಪ್ರಶಸ್ತಿಗೂ ಪಾತ್ರವಾಗಿತ್ತು. ಇದಲ್ಲದೆ ಈ ಚಿತ್ರ ಅತ್ಯುತ್ತಮ ಬಾಲನಟಿ, ಅತ್ಯುತ್ತಮ ಪ್ರಾದೇಶಿಕ ಶಬ್ಧ ಸಂಕಲನ ಮತ್ತು ಅತ್ಯುತ್ತಮ ಸಂಕಲನ ಪ್ರಶಸ್ತಿಗಳಿಗೂ ಭಾಜನವಾಗಿತ್ತು.