ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮೇಯರ್ ಆಗಿ ಕಾಂಗ್ರೆಸ್‌ನ ಗಂಗಾಂಬಿಕೆ ಹಾಗೂ ಜೆಡಿಎಸ್‌ನ ರಮೀಳಾ ಉಮಾಶಂಕರ್ ಅವರು ಆಯ್ಕೆಯಾಗಿದ್ದಾರೆ. ಬಿಜೆಪಿ ಸದಸ್ಯರು ಸಭಾತ್ಯಾಗದ ಬಳಿಕ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಮತದಾನ ಪ್ರಕ್ರಿಯೆ ನಡೆಯಿತು.
ಮೇಯರ್ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಗಂಗಾಂಬಿಕೆ ಹಾಗೂ ಬಿಜೆಪಿಯಿಂದ ಶೋಭಾ ಅವರು ನಾಮಪತ್ರ ಸಲ್ಲಿಸಿದ್ದರು. ಉಪಮೇಯರ್ ಸ್ಥಾನಕ್ಕೆ ಜೆಡಿಎಸ್‌ನ ರಮೀಳಾ ಉಮಾಶಂಕರ್ ಹಾಗೂ ಬಿಜೆಪಿಯಿಂದ ಧರ್ಮರಾಯಸ್ವಾಮಿ ದೇವಸ್ಥಾನ ವಾರ್ಡ್ ಸದಸ್ಯೆ ಪ್ರತಿಭಾ ಧನರಾಜ್ ನಾಮಪತ್ರ ಸಲ್ಲಿಸಿದ್ದರು.
ಇದಕ್ಕೂ ಮುನ್ನ, ಪಕ್ಷೇತರ ಸದಸ್ಯ ಆನಂದಕುಮಾರ್ ಅವರಿಗಾಗಿ ಬಿಜೆಪಿ, ಕಾಂಗ್ರೆಸ್ ಸದಸ್ಯರ ನಡುವೆ ಕಿತ್ತಾಟ, ತಳ್ಳಾಟವೂ ನಡೆಯಿತು. ಆಗ ಆನಂದ ಕುಮಾರ್ ‘ನಾನು ಬರಲ್ಲ ಹೋಗಿ’ ಎಂದು ಹೇಳಿ ಬಿಜೆಪಿಯವರಿಗೆ ಮುಖಭಂಗ ಮಾಡಿದರು.
ನಮ್ಮ ಎಲ್ಲ ಸದಸ್ಯರು ನಮ್ಮ ಸಂಪರ್ಕದಲ್ಲೇ ಇದ್ದಾರೆ. ಸಭೆಗೆ ಕೆಲವರು ಬರಲು ಸಾಧ್ಯವಾಗಿಲ್ಲ. ನಮ್ಮ ಅಭ್ಯರ್ಥಿಗಳು ಗೆಲ್ಲುತ್ತಾರೆ. ಕುಮಾರಸ್ವಾಮಿ ನಿರ್ಧಾರಕ್ಕೆ ಎಲ್ಲರೂ ಬದ್ಧ. ಬಿಜೆಪಿಯವರು ಆಪರೇಷನ್ ಕಮಲ ಮಾಡಲು ಹೋಗಿ ನರ್ಸಿಂಗ್ ಹೋಮ್ ತೆಗೆದಿದ್ದಾರೆ. ಅಲ್ಲಿಗೆ ಯಾವುದೇ ರೋಗಿ ಹೋಗದೆ ವ್ಯರ್ಥವಾಗಿದೆ. 22 ಮಂದಿ ಜೆಡಿಎಸ್‌ನವರು ಜತೆಗಿದ್ದಾರೆ. ಯಾರೂ ವಿಪ್ ಯಾರೂ ವಿಪ್ ಉಲ್ಲಂಘಿಸುವುದಿಲ್ಲ ಎಂದು ಟಿ.ಎ. ಶರವಣ ಹೇಳಿದರು.