ಮಾವೋ ವಿಚಾರವಾದಿಗಳ ಗೃಹಬಂಧನ ಅವಧಿ ವಿಸ್ತರಣೆ

ನವದೆಹಲಿ: ನಕ್ಸಲರೊಂದಿಗೆ ನಂಟು ಹೊಂದಿದ್ದ ಆರೋಪದ ಹಿನ್ನಲೆಯಲ್ಲಿ ಗೃಹ ಬಂಧನಕ್ಕೀಡಾಗಿದ್ದ ಐವರು ಮಾವೋ ವಿಚಾರವಾದಿಗಳ ಗೃಹಬಂಧನ ಅವಧಿಯನ್ನು ಮತ್ತೆ ನಾಲ್ಕು ವಾರಗಳವರೆಗೆ ವಿಸ್ತರಿಸಿದ ಸುಪ್ರೀಂ ಕೋರ್ಟ್‌, ವಿಶೇಷ ತನಿಖೆಗೆ ಒಪ್ಪಿಸಲು ನಿರಾಕರಿಸಿದೆ.

ವಿಚಾರವಾದಿಗಳ ಬಂಧನವನ್ನು ಖಂಡಿಸಿ, ಎಸ್‌ಐಟಿ ತನಿಖೆಗೆ ಒತ್ತಾಯಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಮುಖ್ಯನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ, ನಾಲ್ಕು ವಾರಗಳಿಗೂ ಅಧಿಕ ಕಾಲ ಐವರು ವಿಚಾರವಾದಿಗಳ ಗೃಹಬಂಧನವನ್ನು ವಿಸ್ತರಿಸಿದೆ. ಅಲ್ಲದೆ ಎಸ್‌ಐಟಿ ತನಿಖೆ ಕುರಿತು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ.ಬಂಧಿತರು ಪರಿಹಾರ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಈ ಕುರಿತು ವಿಚಾರವಾದಿಗಳ ಬಂಧನ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಮಧ್ಯಪ್ರವೇಶಿಸುವುದಿಲ್ಲ. ಸಾಕ್ಷ್ಯಾಧಾರಗಳು ಇಲ್ಲದೆ ಆರೋಪಿಗಳನ್ನು ಬಂಧಿಸಲಾಗಿದೆ ಎನ್ನುವುದನ್ನು ಸಂಪೂರ್ಣ ಒಪ್ಪಲು ಸಾಧ್ಯವಿಲ್ಲ. ಮೇಲ್ನೋಟಕ್ಕೆ ಅವರು ನಿಷೇಧಿತ ಸಿಪಿಐ ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದರ ಬಗ್ಗೆ ಕೆಲವು ಸಾಕ್ಷ್ಯಗಳಿದ್ದವು ಈ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ನ ನ್ಯಾ. ಖನ್ವಾಲಿಕರ್ ಹೇಳಿದ್ದಾರೆ.

ತೆಲುಗು ಕವಿ ವರವರ ರಾವ್‌, ವಿಚಾರವಾದಿ ವರ್ನಾನ್‌ ಗೊನ್ಸಾಲ್ವೆನ್ಸ್​ ಮತ್ತು ಅರುಣ್‌ ಪೆರರಾ, ವಕೀಲೆ ಸುಧಾ ಭಾರಧ್ವಾಜ್‌ ಮತ್ತು ನಾಗರಿಕ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರನ್ನು ನಕ್ಸಲರೊಂದಿಗೆ ನಂಟು ಹೊಂದಿರುವ ಶಂಕೆ ಮೇರೆಗೆ ಪುಣೆ ಪೊಲೀಸರು ವಶಕ್ಕೆ ಪಡೆದಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ