ಬೆಂಗಳೂರು, ಸೆ.28- ಕಾನೂನು ಪಾಲನೆ ಮಾಡದಿರುವುದು ಹಾಗೂ ಕಾಂಗ್ರೆಸ್-ಜೆಡಿಎಸ್ ಸದಸ್ಯರ ಗೂಂಡಾಗಿರಿಯಿಂದ ಬೇಸತ್ತು ಮೇಯರ್ ಚುನಾವಣೆಯನ್ನು ನಾವು ಬಹಿಷ್ಕರಿಸಬೇಕಾಯಿತು ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದರು.
ಬಿಜೆಪಿಯಿಂದ ಶೋಭಾ ಆಂಜನಪ್ಪ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದಿಂದ ಗಂಗಾಂಬಿಕೆ ಮಲ್ಲಿಕಾರ್ಜುನ ಅವರು ಮೇಯರ್ ಚುನಾವಣೆಗೆ ಉಮೇದುವಾರಿಕೆ ಸಲ್ಲಿಸಿದ ನಂತರ ಅಂಕಿ-ಸಂಖ್ಯೆ ತಪ್ಪಾದ ಹಿನ್ನೆಲೆಯಲ್ಲಿ ಚುನಾವಣೆ ಬಹಿಷ್ಕರಿಸಿ ಹೊರಬಂದ ವೇಳೆ ಅಶೋಕ್ ಸುದ್ದಿಗಾರರೊಂದಿಗೆ ಮಾತನಾಡಿದರು.
ಜಂಗಲ್ರಾಜ್ನಂತೆ ಮೇಯರ್ ಚುನಾವಣೆ ನಡೆಸುತ್ತಿದ್ದಾರೆ. ಪಕ್ಷೇತರರನ್ನು ಹೈಜಾಕ್ ಮಾಡಿದ್ದಾರೆ. ಗಂಟೆ 11.30 ಆದರೂ ಕಾಂಗ್ರೆಸ್ ಸದಸ್ಯರನ್ನು ಪ್ರಾದೇಶಿಕ ಆಯುಕ್ತರು ಒಳಗೆ ಬಿಟ್ಟಿದ್ದಾರೆ. ಅವರು ಕಾಂಗ್ರೆಸ್ಗೆ ಸಪೆÇೀರ್ಟ್ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನಾಲ್ವರು ಪರಿಷತ್ ಸದಸ್ಯರಿಗೆ ಮತದಾನಕ್ಕೆ ಅವಕಾಶ ನೀಡಬಾರದು ಎಂದು ನಾವು ದೂರು ಕೊಟ್ಟಿದ್ದೆವು. ಆದರೂ ಅವರಿಗೆ ಅವಕಾಶ ಕೊಟ್ಟಿದ್ದಾರೆ. ಇದೊಂದು ಅಕ್ರಮ ಚುನಾವಣೆ. ಸರಿಯಾಗಿ ಚುನಾವಣೆ ನಡೆದಿದ್ದರೆ ಒಂದು ವೋಟಿನಿಂದ ನಾವೇ ಗೆಲ್ಲುವ ಸಾಧ್ಯತೆ ಇತ್ತು. ಆದರೆ, ಗೂಂಡಾಗಿರಿ ಮಾಡಿ ಬಿಜೆಪಿ ಕಚೇರಿಗೆ ನುಗ್ಗಿ ಪಕ್ಷೇತರರನ್ನು ಆ ಪಕ್ಷದವರು ಎಳೆದೊಯ್ದಿದ್ದಾರೆ.
ಚುನಾವಣಾಧಿಕಾರಿಗಳ ಧೋರಣೆ ಹಾಗೂ ಕಾಂಗ್ರೆಸ್-ಜೆಡಿಎಸ್ನವರ ಗೂಂಡಾಗಿರಿ ಖಂಡಿಸಿ ನಾವು ಚುನಾವಣೆ ಬಹಿಷ್ಕರಿಸಿ ಹೊರನಡೆದವು ಎಂದು ಅಶೋಕ್ ಸ್ಪಷ್ಟಪಡಿಸಿದರು.