ನವದೆಹಲಿ,ಸೆ.28-ಪರಮಾಣು ಪೂರೈಕೆದಾರರ ಗುಂಪು (ಎನ್ಎಸ್ಜಿ) ಸದಸ್ಯತ್ವಕ್ಕಾಗಿ ಭಾರತಕ್ಕೆ ಬೆಂಬಲ ನೀಡುವುದಾಗಿ ಬ್ರಿಟನ್ ಪುನರುಚ್ಚರಿಸಿದೆ.
ಅಂತಾರಾಷ್ಟ್ರೀಯ ಪರಮಾಣು ವಹಿವಾಟಿನ ಉನ್ನತ ಗುಂಪಿನೊಳಗೆ ಭಾರತ ಪ್ರವೇಶ ಪಡೆದುಕೊಳ್ಳಲು ಎಲ್ಲ ರೀತಿಯ ಅರ್ಹತೆ ಹೊಂದಿದೆ ಎಂದು ಬ್ರಿಟನ್ ಹೇಳಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ ಮತ್ತು ಬ್ರಿಟನ್ನ ವಿದೇಶಾಂಗ ಮತ್ತು ಕಾಮನ್ವೆಲ್ತ್ ಕಚೇರಿ ಅಧಿಕಾರಿಗಳ ನಡೆದ ಚರ್ಚೆ ವೇಳೆ, ಅಂತಾರಾಷ್ಟ್ರೀಯ ನಿಯಮಾವಳಿಗಳ ರಕ್ಷಕ ಮತ್ತು ಪ್ರಮುಖ ಸದಸ್ಯನಾಗುವ ಅರ್ಹತೆ ಹೊಂದಿರುವುದನ್ನು ಬ್ರಿಟನ್ ಗಮನಿಸಿದೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿವೆ.
ಎನ್ಎಸ್ಜಿ ಸದಸ್ಯತ್ವ ಹೊಂದಿಕೆಗೆ ಭಾರತ ಸೂಕ್ತ ದೇಶವಾಗಿದೆ. ಅದು ಸದಸ್ಯತ್ವ ಪಡೆಯಬೇಕು ಎನ್ನುವುದು ನಮ್ಮ ನಂಬಿಕೆ. ಭಾರತದ ಸದಸ್ಯತ್ವಕ್ಕೆ ಯಾವ ಆಕ್ಷೇಪಣೆಗಳಿವೆ ಎಂದು ಚೀನಾ ಮಾತ್ರವೇ ವಿವರಿಸಬಲ್ಲದು ಎಂದು ಹೇಳಿವೆ.
ಪರಮಾಣು ಪ್ರಸರಣ ಮತ್ತು ಅಂತಾರಾಷ್ಟ್ರೀಯ ಕುರಿತು ನಡೆದ ಮಾತುಕತೆ ವೇಳೆ ಭಾರತ, ಪಾಕಿಸ್ತಾನ ಮತ್ತು ಉತ್ತರ ಕೊರಿಯಾಗಳ ನಡುವಿನ ಪರಮಾಣು ಪ್ರಸರಣ ನಂಟಿನ ಬಗ್ಗೆ ಪ್ರಸ್ತಾಪಿಸಿತು.ಈ ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಈಗಿನ ವರ್ತನೆ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲ ಎಂದು ಬ್ರಿಟನ್ ಹೇಳಿದೆ.
ರಾಸಾಯನಿಕ ಶಸ್ತ್ರಾಸ್ತ್ರ ನಿಷೇಧ ಸಂಸ್ಥೆಗಳಲ್ಲಿ (ಒಪಿಸಿಡಬ್ಲ್ಯೂ) ರಷ್ಯಾದೊಂದಿಗೆ ಭಾರತವೂ ಒಂದಾಗಿರುವುದು ನಮಗೆ ಬೇಸರ ತಂದಿದೆ. ಭಾರತ ತನ್ನ ನಿಲುವನ್ನು ಮರುಪರಿಶೀಲಿಸಲಿದೆ ಎಂಬ ಭರವಸೆ ಇರುವುದಾಗಿ ಬ್ರಿಟನ್ ತಿಳಿಸಿದೆ.