ಬೆಂಗಳೂರು,ಸೆ.27- ಪರಿಶಿಷ್ಟ ವರ್ಗದವರಿಗೆ ಕೇಂದ್ರ ಸರ್ಕಾರವು 7.5 ಮೀಸಲಾತಿ ನೀಡುತ್ತಿರುವಂತೆಯೇ ರಾಜ್ಯ ಸರ್ಕಾರವು ಶೇ.7.5 ಮೀಸಲಾತಿ ನೀಡಬೇಕೆಂದು ಹೈದರಾಬಾದ್ ಕರ್ನಾಟಕ ವಾಲ್ಮೀಕಿ ನಾಯಕರ ಸಂಘ ಒತ್ತಾಯಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ವಿಭಾಗೀಯ ಅಧ್ಯಕ್ಷ ನಂದಕುಮಾರ್ ಮಾಲಿ ಪಾಟೀಲ್ ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣ ಪತ್ರ ತಡೆದ ಸಾವಿರಾರು ಸಂಖ್ಯೆಯಲ್ಲಿ ಸರ್ಕಾರಿ ನೌಕರಿ ಗಿಟ್ಟಿಸಿದ್ದಾರೆ ಹಾಗೂ ವಿವಿಧ ಇಲಾಖೆಯಲ್ಲಿ ಹಲವಾರು ಸವಲತ್ತುಗಳನ್ನು ಪಡೆದುಕೊಳ್ಳುತ್ತಿರುವುದರಿಂದ ಅರ್ಹ ಎಸ್ಟಿ ಜನಾಂಗದವರಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಅದೇ ರೀತಿ ಪ್ರವರ್ಗ-1ರಲ್ಲಿ ಬರುವ ಕಬ್ಬಲಿಗಾ ಜನಾಂಗದವರು ಸಹ ಪರಿಶಿಷ್ಟ ಪಂಗಡದ ಪಟ್ಟಿ ಇರುವ ಟೋಕರಿ ಕೋಳಿ ಜಾತಿ ಹೆಸರಿನಲ್ಲಿ ಪ್ರಮಾಣ ಪತ್ರ ಪಡೆಯುತ್ತಿದ್ದಾರೆ. ಈ ಬಗ್ಗೆ ನಾವು ಈ ಭಾಗದಲ್ಲಿ ದಶಕಗಳಿಂದ ಹೋರಾಟ ಮಾಡಿ ಸರ್ಕಾರದ ಗಮನ ಸೆಳದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಸುಳ್ಳು ಜಾತಿ ಪ್ರಮಾನ ಪತ್ರ ಪಡೆದು ಸರ್ಕಾರ ಹುದ್ದೆ ಮತ್ತು ಸೌಲಭ್ಯ ಪಡೆದವರ ವಿರುದ್ದ ಸೂಕ್ತಕ್ರಮ ಕೈಗೊಳ್ಳಬೇಕು. ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಬೇಕು ಹಾಗೂ ಕಾನೂನಿನ ರೀತ್ಯ ಸೂಕ್ತ ಕ್ರಮ ಕೈಗೊಳ್ಳಬೇಕು ಸೇರಿದಂತೆ ರಾಜ್ಯ ಸರ್ಕಾರದಲ್ಲಿ ಶೇ.7.5ರಷ್ಟು ಮೀಸಲಾತಿಯನ್ನು ನೀಡಬೇಕೆಂದು ಒತ್ತಾಯಿಸಿದರು.
ಈ ಹಿನ್ನೆಲೆಯಲ್ಲಿ ಅ.22ರಂದು ಕಲಬುರಗಿಯ ಪ್ರಾದೇಶಿಕ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ನಂದಕುಮಾರ್ ಮಾಲಿ ಪಾಟೀಲ ತಿಳಿಸಿದರು.