ನಿರಂತರ ಕಲ್ಲು ಗಣಿಗಾರಿಕೆ… ಕೆಆರ್​ಎಸ್ ಬಳಿ ಕಂಪನ, ಆತಂಕದಲ್ಲಿ ಜನರು!

ಮಂಡ್ಯ: ಕಾವೇರಿ ಕಣಿವೆ ಜನರ ಜೀವನಾಡಿಯಾದ ಕೆಆರ್​ಎಸ್​ ಜಲಾಶಯಕ್ಕೆ ಜಿಲ್ಲೆಯ ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯಿಂದಾಗಿ ಅದರ ಸುತ್ತಮುತ್ತಲಿನ ಜನರು ಅಪಾಯದಲ್ಲಿ ಜೀವನ ನಡೆಸುವಂತಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಕೆಆರ್​ಎಸ್​ ಸುತ್ತಮುತ್ತ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು ಅಲ್ಲಿ ಬಳಕೆಯಾಗುತ್ತಿರುವ ಸ್ಫೋಟಕಗಳಿಂದ ಜಲಾಶಯದ ಭದ್ರತೆಗೆ ಅಪಾಯ ಎದುರಾಗಿದೆ ಎಂದು ಈಗಾಗಲೇ ಪೊಲೀಸ್​ ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ.
ಇದರ ಮಧ್ಯೆ ಎರಡು ದಿನಗಳ ಹಿಂದೆ ನಡೆದ ಘಟನೆವೊಂದು ಮತ್ತಷ್ಟು ಆತಂಕಕ್ಕೊಳಗಾಗುವಂತೆ ಮಾಡಿದೆ. ದಿನಾಂಕ 25/9ರ ಮಧ್ಯಾಹ್ನ 2:37ರ ವೇಳೆ ಕೆಆರ್​ಎಸ್​ ಸುತ್ತಮುತ್ತಲಿನ ಪ್ರದೇಶ ಕಂಪನಕ್ಕೊಳಗಾಗಿದೆ ಎಂದು ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮಾಹಿತಿ ನೀಡಿದೆ.
ಇದರ ಜತೆಗೆ ಪ್ರತಿದಿನ ನಡೆಯುತ್ತಿರುವ ವಿದ್ಯಮಾನಗಳ ಕುರಿತಾಗಿ ನಾವು ಸರ್ಕಾರಕ್ಕೆ ಮಾಹಿತಿ ನೀಡುತ್ತಿರುವುದಾಗಿ ತಿಳಿಸಿರುವ ಕೆಎಸ್​​ಎನ್​ಡಿಎಂಸಿ ಡೈರೆಕ್ಟರ್​ ಈ ಹಿಂದೆ 2011ರಲ್ಲೂ ಇಂತಹ ಘಟನೆ ನಡೆದಿತ್ತು ಎಂದು ತಿಳಿಸಿದ್ದಾರೆ.
ಇನ್ನು ಈ ಹಿಂದೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಆರ್​ಟಿಐ ಕಾರ್ಯಕರ್ತರೊಬ್ಬರು ನೀಡಿದ ದೂರಿನನ್ವಯ ಮಂಡ್ಯ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕೆಆರ್​ಎಸ್​ ಸುತ್ತಲೂ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕುರಿತು ವರದಿ ನೀಡುವಂತೆ ಸೂಚಿಸಿದ್ದರು. ಅದರಂತೆ ಶ್ರೀರಂಗಪಟ್ಟಣ ವೃತ್ತದ ಡಿವೈಎಸ್​​ಪಿ ವಿಶ್ವನಾಥ್​ ಅವರು ವರದಿ ಸಿದ್ಧಪಡಿಸಿದ್ದು, ಕೆಆರ್​ಎಸ್​ಗೆ ಅಪಾಯವಿದೆ ಎಂದು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು.
ಪಾಂಡವಪುರ ತಾಲೂಕಿನ ಚಿನಕುರಳಿ, ಬೇಬಿ ಬೆಟ್ಟದ ಕಾವಲು, ಹೊನಗಾನಹಳ್ಳಿ, ಬನ್ನಂಗಾಡಿ ಗ್ರಾಮಗಳ ಬೇಬಿ ಬೆಟ್ಟದ ತಪ್ಪಲಿನ ಪ್ರದೇಶಗಳಲ್ಲಿ ಹಲವು ಕಲ್ಲು ಕ್ವಾರೆಗಳು ಅಕ್ರಮವಾಗಿ ನಡೆಯುತ್ತಿದ್ದು, ಇದರಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ. ವ್ಯವಸಾಯಕ್ಕೆ ತೊಂದರೆಯಾಗಿ, ಕಲ್ಲು ಸಿಡಿತಕ್ಕೆ ಬಳಸುವ ಸ್ಫೋಟಕಗಳಿಂದ ಮನೆಗಳು ಜಖಂಗೊಂಡಿವೆ. ಭಾರೀ ಸ್ಫೋಟಕ ಬಳಕೆಯಿಂದ ಕೃಷ್ಣರಾಜಸಾಗರ ಜಲಾಶಯಕ್ಕೂ ಗಂಡಾಂತರವಿದೆ ಎಂಬ ಆತಂಕ ವ್ಯಕ್ತವಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ