
ಬೆಂಗಳೂರು,ಸೆ.27-ಸಾರಿಗೆ ಸಂಸ್ಥೆಗಳು ನಷ್ಟದಲ್ಲಿದ್ದರೂ ಪ್ರಯಾಣಿಕರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕಾಗಿ ರಾಜ್ಯ ಸರ್ಕಾರ ಏರಿಕೆ ಮಾಡಿದ್ದ ಬಸ್ ದರವನ್ನು ಹಿಂಪಡೆದಿದ್ದರೂ ಖಾಸಗಿಯವರು ಮಾತ್ರ ಸದ್ದಿಲ್ಲದೆ ದರ ಏರಿಕೆ ಮಾಡಲು ಮುಂದಾಗಿದ್ದಾರೆ.
ಮುಂದಿನ ತಿಂಗಳು ದಸರಾ ಹಾಗೂ ದೀಪಾವಳಿ ಹಬ್ಬ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಸಾರಿಗೆ ಸಂಸ್ಥೆಯವರು ಪ್ರಯಾಣ ದರವನ್ನು ದುಪ್ಪಟ್ಟು ಏರಿಕೆ ಮಾಡುವ ಮೂಲಕ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವುದು ಬಹುತೇಕ ಖಚಿತ.
ನೂತನ ದರವು ಅಕ್ಟೋಬರ್ 1ರಿಂದಲೇ ಜಾರಿಯಾಗುವ ಸಂಭವವಿದೆ.
ಸಾಮಾನ್ಯವಾಗಿ ದಸರಾ ಮತ್ತು ದೀಪಾವಳಿ ಸಂದರ್ಭಗಳಲ್ಲಿ ರಾಜಧಾನಿ ಬೆಂಗಳೂರು ಹಾಗೂ ಎರಡನೇ ಹಂತದ ನಗರಗಳಾದ ಮೈಸೂರು, ಮಂಗಳೂರು ಸೇರಿದಂತೆ ಮತ್ತಿತರ ಪ್ರಮುಖ ನಗರಗಳಿಂದ ತಮ್ಮ ತಮ್ಮ ಊರುಗಳಿಗೆ ಕುಟುಂಬ ಸಮೇತ ಹೋಗುವುದು ಸರ್ವೆ ಸಾಮಾನ್ಯ.
ಈ ಸಮಯವನ್ನು ಸರಿಯಾಗಿಯೇ ಸದುಪಯೋಗಪಡಿಸಿಕೊಳ್ಳುವ ಖಾಸಗಿ ಸಾರಿಗೆ ಸಂಸ್ಥೆಯವರು ಹಾಲಿ ಇರುವ ದರಕ್ಕಿಂತ ಶೇ.200ರಷ್ಟು ಏರಿಕೆ ಮಾಡಲಿದ್ದಾರೆ.
ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ಗಳಲ್ಲಿ 500-900 ರೂ. ಇದೆ. ಇನ್ನು ಸರ್ಕಾರಿ ಬಸ್ಗಳಲ್ಲಿ 500-903ರವರೆಗೂ ದರವನ್ನು ನಿಗದಿಪಡಿಸಲಾಗಿದೆ. ಅ.1ರಿಂದ ಈ ದರ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಲಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ಗಳ ದರ 1000ದಿಂದ 2000 ದರ ಹೆಚ್ಚಾದರೆ ಸರ್ಕಾರಿ ಬಸ್ಗಳಲ್ಲಿ 712ರಿಂದ 1120 ರೂ.ವರೆಗೆ ಏರಿಕೆಯಾಗಲಿದೆ.
ಹುಬ್ಬಳ್ಳಿಗೆ ಖಾಸಗಿ ಬಸ್ಗಳಲ್ಲಿ 1000ದಿಂದ 3,500 ರೂ. ಸರ್ಕಾರಿ ಬಸ್ಗಳಲ್ಲಿ 681ನಿಂದ 1111 ರೂ. ಕಲ್ಬುರ್ಗಿಗೆ 960ರಿಂದ 2000, ಕಾರವಾರಕ್ಕೆ 1110ರಿಂದ 3000, ಚೆನ್ನೈಗೆ 950ರಿಂದ 2381 ರೂ.ವರೆಗೆ ಏರಿಕೆಯಾಗುವ ಸಂಭವವಿದೆ.
ಒಂದೆಡೆ ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸಲ್ ಬೆಲೆ ಹೆಚ್ಚಳ ವಾಗುತ್ತಿರುವುದರಿಂದ ಪ್ರಯಾಣ ದರವನ್ನು ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎನ್ನುತ್ತಾರೆ ಖಾಸಗಿ ಬಸ್ ಮಾಲೀಕರು.
ಕಳೆದ ಒಂದೂವರೆ ತಿಂಗಳಿನಿಂದ ಪ್ರತಿದಿನ ಪೆಟ್ರೋಲ್ ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಲೇ ಇದೆ. ನಿರ್ವಹಣಾ ವೆಚ್ಚ ಸರಿದೂಗಿಸಬೇಕಾದರೆ ಬೆಲೆ ಏರಿಕೆ ಅನಿವಾರ್ಯ. ಅಲ್ಲದೆ ನವರಾತ್ರಿ ಮತ್ತು ದೀಪಾವಳಿ ಹಬ್ಬದ ಸಂದರ್ಭಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವುದರಿಂದ ಬಸ್ ದರವನ್ನು ಏರಿಕೆ ಮಾಡಲೇಬೇಕಾಗುತ್ತದೆ ಎಂದು ಖಾಸಗಿ ಬಸ್ಗಳ ಮಾಲೀಕರು ಹೇಳುತ್ತಾರೆ.
ಕೆಲ ದಿನಗಳ ಹಿಂದೆ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿರುವ ಕಾರಣ ರಾಜ್ಯ ಸರ್ಕಾರ ಬಿಎಂಟಿಸಿ ಸೇರಿದಂತೆ ನಾಲ್ಕು ನಿಗಮಗಳ ಸಾರಿಗೆ ದರವನ್ನು ಶೇ.18ರಷ್ಟು ಏರಿಕೆ ಮಾಡಿತ್ತು. ಆದರೆ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಬಹುದು ಎಂಬ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಕ್ಷಣವೇ ಆದೇಶವನ್ನು ಹಿಂಪಡೆಯಬೇಕೆಂದು ನಿಗಮದ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದರು.