ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರೀಕ್ಷಿತ ಪ್ರಗತಿಯಾಗದೇ ಇದ್ದರೆ ಕ್ರಮ: ಸಚಿವ ಕೃಷ್ಣಬೈರೇಗೌಡ ಎಚ್ಚರಿಕೆ

ಬೆಂಗಳೂರು, ಸೆ.27- ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿಯಾಗದೇ ಇದ್ದರೆ ಗ್ರಾಮ ಪಂಚಾಯ್ತಿ ಕಾರ್ಯದರ್ಶಿಯಿಂದ ಮುಖ್ಯಕಾರ್ಯನಿರ್ವಹಣಾಧಿಕಾರಿವರೆಗೂ ಹೊಣೆ ಮಾಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಎಚ್ಚರಿಕೆ ನೀಡಿದ್ದಾರೆ.

ವಿಕಾಸಸೌಧದಲ್ಲಿಂದು ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಸೋಮಾರಿ ಅಧಿಕಾರಿಗಳ ಚಳಿ ಬಿಡಿಸಿದರು.
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರಾಷ್ಟ್ರದ ಸರಾಸರಿ ಪ್ರಗತಿ ಶೇ.59ರಷ್ಟಿದ್ದರೆ, ರಾಜ್ಯದಲ್ಲಿ ಶೇ.39ರಷ್ಟು ಮಾತ್ರ ಕೆಲಸವಾಗಿದೆ. ನಮ್ಮಲ್ಲಿ ಬರ ಇದೆ. ಹಿಂದುಳಿದ ತಾಲ್ಲೂಕುಗಳಿವೆ. ಅಭಿವೃದ್ಧಿಯ ಬಗ್ಗೆ ಅಧಿಕಾರಿಗಳು ಮಾರುದ್ದ ಭಾಷಣ ಮಾಡುತ್ತಾರೆ. ಆದರೆ, ಕೆಲಸ ಮಾಡುವುದಿಲ್ಲ ಏಕೆ ? ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರ ನಿಗದಿ ಮಾಡಿರುವ ಗುರಿ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಸಾಮಥ್ರ್ಯಕ್ಕನುಗುಣವಾಗಿ ಗುರಿ ನಿಗದಿಯಾಗಿಲ್ಲ. ನಿಗದಿಯಾಗಿರುವ ಗುರಿಯೂ ಸರಿಯಾಗಿ ಪೂರ್ಣಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಸಿದರು.

ಈ ಮೊದಲು ಸಭೆ ನಡೆಸಿದಾಗ ನಾನು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದೆ. ಆದರೆ, ಅದು ಪರಿಣಾಮ ಬೀರಿದಂತೆ ಕಾಣುತ್ತಿಲ್ಲ. ಮುಂದಿನ ಸಭೆಯ ವೇಳೆಗೆ ಯಾವ ಕುಂಟುನೆಪ ಹೇಳದೆ ನರೇಗಾ ಯೋಜನೆಯಲ್ಲಿ ಗುರಿ ಮೀರಿದ ಸಾಧನೆ ಮಾಡಿರಬೇಕು. ಇಲ್ಲದೇ ಹೋದರೆ ಅದಕ್ಕೆ ಸಂಬಂಧಪಟ್ಟಂತೆ ಜಿಲ್ಲಾ ಪಂಚಾಯ್ತಿ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು, ಉಪ ಕಾರ್ಯದರ್ಶಿ, ಪಿಡಿಒ, ಗ್ರಾಪಂ ಕಾರ್ಯದರ್ಶಿಗಳನ್ನು ಹೊಣೆ ಮಾಡಿ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಮ್ಮಲ್ಲಿ ಹಣವಿದೆ. ಕೆಲಸ ಮಾಡಲು ಸಾಕಷ್ಟು ಅವಕಾಶಗಳಿವೆ. ಆದರೆ, ಅಧಿಕಾರಿಗಳ ಬದ್ಧತೆ ಕೊರತೆಯಿಂದ ಹಿಂದುಳಿಯುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

47ಸಾವಿರ ಕೆಲಸ ಬಾಕಿ:
ಕುಡಿಯುವ ನೀರಿನ ಯೋಜನೆಯಲ್ಲಿ ಸುಮಾರು 47 ಸಾವಿರ ಕಾಮಗಾರಿಗಳು ಪೂರ್ಣಗೊಳ್ಳದೆ ನೆನಗುದಿಗೆ ಬಿದ್ದಿವೆ. 2015-16ರಿಂದಲೂ ಸಾವಿರಾರು ಕೆಲಸಗಳು ಬಾಕಿ ಇರುವುದು ಏಕೆ ? ಇದಕ್ಕೆ ಯಾರು ಹೊಣೆ ಎಂದು ಸಚಿವರು ತರಾಟೆಗೆ ತೆಗೆದುಕೊಂಡರು.

ಜಿಲ್ಲಾ ಮಟ್ಟದಲ್ಲಿ ನಾನು ಪ್ರಗತಿ ಪರಿಶೀಲನೆ ನಡೆಸಿದಾಗ ಸುಮಾರು 20ರಿಂದ 25 ಕೋಟಿ ರೂ. ಹಣ ಬಾಕಿ ಉಳಿದಿರುತ್ತದೆ. ಇದಕ್ಕೆ ಯಾರಾದರು ಸಮರ್ಥನೆ ನೀಡಲು ಸಾಧ್ಯವೇ ? ಒಂದೆಡೆ ಕೆಲಸವಾಗುತ್ತಿಲ್ಲ. ಹಣವಿಲ್ಲ ಎಂಬ ಆರೋಪ. ಹಣವಿದ್ದರೂ ಅದನ್ನು ಖರ್ಚು ಮಾಡದೆ ಕೆಲಸಗಳನ್ನು ನೆನೆಗುದಿಗೆ ಬೀಳುವಂತೆ ಮಾಡುವ ಅಧಿಕಾರಿಗಳು, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಯೋಜನೆ ಮಂಜೂರಾತಿಗಷ್ಟೇ ತಲೆ ಕೆಡಿಸಿಕೊಂಡರೆ ಸಾಲದು ಕಾಲ ಕಾಲಕ್ಕೆ ಯೋಜನೆ ಪ್ರಗತಿ ಬಗ್ಗೆಯೂ ಗಮನ ಹರಿಸಬೇಕು ಎಂದು ಕೃಷ್ಣಬೈರೇಗೌಡ ಸೂಚನೆ ನೀಡಿದರು.

ಕುಡಿಯುವ ನೀರಿನ ಯೋಜನೆಗಳು ಕಾಲ ಮಿತಿಯಲ್ಲಿ ಪೂರ್ಣಗೊಳ್ಳದೆ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ಈ ಯೋಜನೆಯ ಕಾಮಗಾರಿಗಳಿಗೆ ಹಣ ಖರ್ಚು ಮಾಡದೆ ಬಾಕಿ ಉಳಿಸಿದರೆ ಒಂದು ಅರ್ಥದಲ್ಲಿ ಸರ್ಕಾರಕ್ಕೆ ಲಾಭವಾಗುತ್ತದೆ. ಉಳಿದಿರುವ ಹಣವನ್ನು ನಾವು ಬೇರೆ ಕೆಲಸಗಳಿಗೆ ಬಳಸಿಕೊಳ್ಳಲು ಸಹಕಾರವಾಗುತ್ತದೆ. ಆದರೆ, ಆ ರೀತಿ ಮಾಡುವುದರಿಂದ ಜನ ಸಾಮಾನ್ಯರಿಗೆ ಅನ್ಯಾಯ ಮಾಡಿದಂತಾಗುತ್ತದೆ. ಅಧಿಕಾರಿಗಳು ಬದ್ಧತೆಯಿಂದ ಕೆಲಸ ಮಾಡಿ. ಕಾಲ ಮಿತಿಯಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಿ. ಓವರ್‍ಹೆಡ್ ಟ್ಯಾಂಕ್‍ಗಳ ಕಾಮಗಾರಿಗಳನ್ನು ಸದ್ಯಕ್ಕೆ ನಿಲ್ಲಿಸಿ. ಬೋರ್‍ವೆಲ್ ಯೋಜನೆಗಳನ್ನು ಹೆಚ್ಚಾಗಿ ಕೈಗೆತ್ತಿಕೊಳ್ಳಿ ಎಂದು ಅವರು ಸೂಚಿಸಿದರು.

ಬರ ಪೀಡಿತ ತಾಲ್ಲೂಕುಗಳಿಗೆ ತಲಾ 50 ಲಕ್ಷ ಅನುದಾನ:
ಮಳೆ ಕೊರತೆಯಿಂದಾಗಿ ರಾಜ್ಯದಲ್ಲಿ 86 ತಾಲ್ಲೂಕುಗಳನ್ನು ಬರ ಪೀಡಿತ ಎಂದು ಘೋಷಣೆ ಮಾಡಲಾಗಿದೆ. ಆ ತಾಲ್ಲೂಕುಗಳಲ್ಲಿ ಕೆಲಸ ಕೈಗೆತ್ತಿಕೊಳ್ಳಲು ತಲಾ 50 ಲಕ್ಷ ಬಿಡುಗಡೆ ಮಾಡುವಂತೆ ಸಚಿವ ಸಂಪುಟ ಉಪ ಸಮಿತಿ ಸೂಚನೆ ನೀಡಿದೆ. ಇದು ಒಟ್ಟಾರೆ 43 ಕೋಟಿ ರೂ.ಗಳಾಗಲಿದ್ದು, ಅದನ್ನು ಈಗಿರುವ ಅನುದಾನದಲ್ಲೇ ಬಿಡುಗಡೆ ಮಾಡಬೇಕೆ ಅಥವಾ ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ಅನುದಾನ ಒದಗಿಸಲಿದೆಯೇ ಎಂಬ ಸ್ಪಷ್ಟನೆಯನ್ನು ಇಲಾಖೆಯ ಕಾರ್ಯದರ್ಶಿ ಡಾ.ವಿಶಾಲ್ ಹೇಳಿದರು.

ಇದಕ್ಕೆ ಉತ್ತರ ನೀಡಿದ ಸಚಿವರು ಈಗಾಗಲೇ ಕ್ರಿಯಾ ಯೋಜನೆ ರೂಪಿಸಿ ಹಣ ಮಂಜೂರಾಗಿರುವ ಯೋಜನೆಗಳಿಂದ ಹಣವನ್ನು ಹಿಂಪಡೆದು ಬರ ಪೀಡಿತ ತಾಲ್ಲೂಕುಗಳಿಗೆ ಒದಗಿಸಬಾರದು ಎಂಬುದು ನನ್ನ ವೈಯಕ್ತಿಕ ನಿಲುವು. ಆದರೆ, ಬರಪರಿಹಾರ ಕಾಮಗಾರಿಗಳಿಗೆ ಯಾವ ರೀತಿ ಅನುದಾನ ಒದಗಿಸಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ತಿಳಿಸಿವುದಾಗಿ ಸಚಿವರು ತಿಳಿಸಿದರು.
ಹಿರಿಯ ಅಧಿಕಾರಿ ಎಲ್.ಎ.ಅತಿಕ್ ಸೇರಿದಂತೆ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ