ಚಿತ್ರಕೂಟ: ರಾಫೆಲ್ ಒಪ್ಪಂದಕ್ಕೆ ಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಹಾಗೂ ಉದ್ಯಮಿ ಅನಿಲ್ ಅಂಬಾನಿ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, ರಾಫೆಲ್ ಯುದ್ಧ ವಿಮಾನ ನಿರ್ಮಾಣದ ಗುತ್ತಿಗೆಯನ್ನು ಎಚ್ಎಎಲ್ ಗೆ ನೀಡುವ ಬದಲು ರಿಲಯನ್ಸ್ ಡಿಫೆನ್ಸ್ ಗೆ ನೀಡುವ ಮೂಲಕ ಪ್ರಧಾನಿ ಮೋದಿ ಅನಿಲ್ ಅಂಬಾನಿಗೆ ಲಾಭ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಡಿಸೆಂಬರ್ ನಲ್ಲಿ ಚುನಾವಣೆ ಎದುರಿಸಲಿರುವ ಮಧ್ಯ ಪ್ರದೇಶದ ಚಿತ್ರಕೂಟದಲ್ಲಿ ಇಂದು ಕಾಂಗ್ರೆಸ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಅನಿಲ್ ಅಂಬಾನಿ ಈಗಾಗಲೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಗಳಿಂದ ಪಡೆದ 45 ಸಾವಿರ ಕೋಟಿ ರುಪಾಯಿ ಸಾಲ ಮರುಪಾವತಿಸದೆ ಸುಸ್ತಿದಾರ ಆಗಿದ್ದಾರೆ ಎಂದು ದೂರಿದರು.
ಅಂಬಾನಿ ತಮ್ಮ ಜೀವಮಾನದಲ್ಲಿ ಒಂದೇ ಒಂದು ಯುದ್ಧ ವಿಮಾನ ನಿರ್ಮಿಸಿಲ್ಲ. ಅಲ್ಲದೆ 45 ಸಾವಿರ ಕೋಟಿ ರುಪಾಯಿ ಸುಸ್ತಿದಾರ. ಆದರೂ ಪ್ರಧಾನಿ ಮೋದಿ ಅವರು ಎಚ್ಎಎಲ್ ಬದಲು ಅಂಬಾನಿಗೆ ರಾಫೆಲ್ ಗುತ್ತಿಗೆ ನೀಡಿದ್ದು ಏಕೆ? ಎಂದು ಪ್ರಶ್ನಿಸಿದ್ದಾರೆ.
ರಾಫೆಲ್ ಡೀಲ್ ಗೂ ಕೇವಲ 10 ದಿನಗಳ ಮುನ್ನ ರಿಲಯನ್ಸ್ ಡಿಫೆನ್ಸ್ ಸ್ಥಾಪಿಸಲಾಗಿದೆ. ಅಂತಹ ಅನುಭವ ಇಲ್ಲದ ಕಂಪನಿಗೆ ರಾಫೆಲ್ ಡೀಲ್ ನೀಡುವ ಬದಲು ಬೆಂಗಳೂರು ಮೂಲದ ಎಚ್ಎಎಲ್ ಗೆ ನೀಡಿದ್ದರೆ ಸಾಕಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಅಲ್ಲದೆ ಎಚ್ಎಎಲ್ ಗೆ 70 ವರ್ಷಗಳ ಅನುಭವ ಇದೆ ಎಂದು ಹೇಳಿದ್ದಾರೆ.