ಹರಿದ್ವಾರ: ಯಾರೇ ಆಗಲಿ ತಮ್ಮ ಅಧಿಕಾರ, ಅಥವಾ ಪದವಿ ಹೊಂದುವುದಕ್ಕಾಗಿ ಶ್ರೀರಾಮನನ್ನು ಸಾಧನವಾಗಿ ಬಳಸಬಾರದು ಎಂದು ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ.
“ರಾಮನು ನನ್ನ ಪಾಲಿಗೆ ಓರ್ವ ಆದರ್ಶ ವ್ಯಕ್ತಿಯಾಗಿದ್ದಾನೆ. ಈತನೊಂದು ರಾಷ್ಟ್ರೀಯ ಚಿನ್ಹೆಯಂತಿದ್ದು ಇದರಲ್ಲಿ ಯಾವ ರಾಜಕೀಯ ಉದ್ದೇಶವಿರುವುದನ್ನು ನಾನು ಕಾಣಲಾರೆ. ರಾಮನು ನಮ್ಮ ಪೂರ್ವಜನಾಗಿದ್ದು ಆತ ನಮ್ಮ ಹೆಮ್ಮೆಯ ಗುರುತಾಗಿದ್ದಾನೆ. ಹೀಗಾಗಿ ಶ್ರೀರಾಮನ ಹೆಸರಲ್ಲಿ ’ಪವರ್ ಪಾಲಿಟಿಕ್ಸ್’ ನಡೆಸುವುದು ಸರಿಯಲ್ಲ ಎಂದರು.
ಸುಪ್ರೀಂ ತೀರ್ಪಿನ ಕುರಿತು ಮಾತನಾಡಿದ ರಾಮ್ ದೇವ್, ದೇವರು ಸರ್ವಾಂತರ್ಯಾಮಿ, ಅವನನ್ನು ನಾವೆಲ್ಲಿದ್ದರೂ ಪೂಜಿಸಬಹುದು. ಮೊದಲು ನಾವು ಮಾಡುವ ಕೆಲಸಗಳಲ್ಲಿ ದೇವರನ್ನು ಕಾಣಬೇಕು. ಇದೇ ನಿಜವಾದ ಪೂಜೆ. ನಮ್ಮ ಕೆಲಸಗಳು ಉತ್ತಮವಾಗಿದ್ದರೆ ದೇವರ ಆಶೀರ್ವಾದ ನಮಗಿದ್ದೇ ಇರುತ್ತದೆ ಎಂದರು. ನಮ್ಮ ನ್ಯಾಯಾಂಗ ವ್ಯವಸ್ಥೆ ಉತ್ತಮವಾಗಿದ್ದು ನಾನು ನ್ಯಾಯಾಲಯ ಏನೇ ತಿರ್ಪು ನೀಡಿದರೂ ಅದು ಉತ್ತಮವಾಗಿಯೇ ಇರಲಿದೆ ಎಂದು ಭಾವಿಸುತ್ತೇನೆ ಎಂದಿದ್ದಾರೆ.