ನವದೆಹಲಿ: ಕಾಂಗ್ರೆಸ್-ಮಹಾಘಟಬಂಧನದ ಜೊತೆ ಗುರಿತಿಸಿಕೊಂಡಿದ್ದ ಎನ್ ಸಿಪಿ ನಾಯಕ ಶರದ್ ಪವಾರ್ ರಾಫೆಲ್ ಒಪ್ಪಂದದ ಕುರಿತ ಪ್ರಧಾನಿ ನರೇಂದ್ರ ಮೋದಿ ಪರ ನಿಂತಿದ್ದಾರೆ.
ಕಾಂಗ್ರೆಸ್ ನಾಯಕರು ರಾಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಿರಂತರ ವಾಗ್ದಾಳಿಗಳನ್ನು ನಡೆಸುತ್ತಿದ್ದಾರೆ ಈ ನಡುವೆ ಯುಪಿಎ ಮಿತ್ರಪಕ್ಷದಲ್ಲಿ ಗುರುತಿಸಿಕೊಂಡಿದ್ದ ಶರತ್ ಪವಾರ್ ಪ್ರಧಾನಿ ನರೇಂದ್ರ ಮೋದಿ ಉದ್ದೇಶಗಳ ಬಗ್ಗೆ ಜನರಿಗೆ ಅನುಮಾನಗಳಿಲ್ಲ, ವಿಪಕ್ಷಗಳ ಬೇಡಿಕೆ ಸೂಕ್ತವಲ್ಲ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿಗೆ ಕಾರಣರಾಗಿದ್ದಾರೆ.
ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿರುವ ಮಾಜಿ ರಕ್ಷಣಾ ಸಚಿವ ಶರತ್ ಪವಾರ್, ರಾಫೆಲ್ ವಿಮಾನಗಳ ತಾಂತ್ರಿಕ ವಿವರಗಳನ್ನು ಕೇಳುತ್ತಿರುವ ವಿಪಕ್ಷಗಳ ಬೇಡಿಕೆ ಸೂಕ್ತವಾಗಿಲ್ಲ. ಆದರೆ ರಾಫೆಲ್ ವಿಮಾನಗಳ ಬೆಲೆಯನ್ನು ಬಹಿರಂಗಗೊಳಿಸುವುದರಲ್ಲಿ ಸರ್ಕಾರಕ್ಕೆ ಯಾವುದೇ ಸಮಸ್ಯೆಯೂ ಇಲ್ಲ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಉದ್ದೇಶಗಳ ಬಗ್ಗೆ ದೇಶದ ಜನತೆಗೆ ಅನುಮಾನ ಇಲ್ಲ, ಆದರೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕರಣದಲ್ಲಿ ನಡೆದುಕೊಂಡ ರೀತಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದೆ ಎಂದು ತಿಳಿಸಿದ್ದಾರೆ.