ಬೆಂಗಳೂರು: ಜಿಮ್ ಟ್ರೈನರ್ ಕಿಡ್ನಾಪ್ ಹಾಗೂ ಹಲ್ಲೆ ಆರೋಪ ಪ್ರಕರಣದಲ್ಲಿ ಜೈಲು ಸೇರಿರುವ ನಟ ದುನಿಯಾ ವಿಜಯ್ ಹಾಗೂ ಸಂಗಡಿಗರು ಜಾಮೀನು ಕೋರಿ 8ನೇ ACMM ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಇಂದಿಗೆ ತೀರ್ಪು ಕಾಯ್ದಿರಿಸಿದ್ದು, ಇಂದು ವಿಜಯ್ಗೆ ಬೇಲ್ ಸಿಗಲಿದೆಯೋ ಜೈಲು ವಾಸ ಮುಂದುವರೆಯಲಿದೆಯೋ ಎಂಬುದು ತಿಳಿಯಲಿದೆ.
ಪ್ರಸಾದ್, ದುನಿಯಾ ವಿಜಯ್, ಮಣಿ ಮೂವರೂ ಬೇಲ್ಗಾಗಿ ಅರ್ಜಿ ಸಲ್ಲಿಸಿದ್ದು, ಸೋಮವಾರ ನ್ಯಾಯಾಲಯ ವಿಚಾರಣೆ ನಡೆಸಿತ್ತು. ವಾದ ಪ್ರತಿವಾದ ಆಲಿಸಿ ಇಂದಿಗೆ ಆದೇಶ ಕಾಯ್ದಿರಿಸಿತ್ತು. ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ವಿಜಯ್ ಬೇಲ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ಮೂವರ ಪರವಾಗಿ ವಕೀಲ ಶಿವಕುಮಾರ್ ವಕಾಲತ್ತು ವಹಿಸಿದ್ದರು. ನ್ಯಾ. ಮಹೇಶ್ ಬಾಬು ಜಾಮೀನು ಅರ್ಜಿ ವಿಚಾರಣೆ ನಡೆಸಿ ಮಧ್ಯಂತರ ಆದೇಶವನ್ನು ಕಾಯ್ದಿರಿಸಿದ್ದರು.
ಆರೋಪಿಗಳ ಪರ ವಾದ ಮಂಡಿಸಿದ ವಕೀಲರು, ಪೊಲೀಸರು ಉದ್ದೇಶ ಪೂರ್ವಕವಾಗಿ ಜಾಮೀನು ರಹಿತ ಸೆಕ್ಷನ್ ಸೇರಿಸಿ ಕುತಂತ್ರದಿಂದ ಬೇಲ್ ಸಿಗದಂತೆ ಮಾಡುತ್ತಿದ್ದಾರೆ. ಯಾವುದೇ ಅಸ್ತ್ರ ಬಳಸಿ ಹಲ್ಲೆ ಮಾಡಿಲ್ಲ. ಕೈಯಿಂದ ಹಲ್ಲೆ ಮಾಡಿದ್ದಾರೆ ಎಂದು ಗಾಯಾಳು ಹೇಳಿಕೆ ನೀಡಿದ್ದಾರೆ. ನಂತರ ವೈದ್ಯರ ಸಮಕ್ಷಮದಲ್ಲಿ ಹೇಳಿಕೆ ಪಡೆಯುವಾಗ ವೆಪನ್ ಬಳಸಿದ್ದಾರೆ ಎಂದು ಹೇಳಿಕೆ ಬದಲಾಯಿಸಿದ್ದಾರೆ ಎಂದು ವಾದ ಮಂಡಿಸಿದ್ರು.
ಬಳಿಕ ಸರ್ಕಾರಿ ಪರ ವಕೀಲ ಅರುಣ್ ವಾದ ಮಂಡಿಸಿ, ಆರೋಪಿ ತುಂಬಾ ಪ್ರಭಾವಿಯಾಗಿದ್ದಾರೆ. ಗಾಯಾಳು ಇನ್ನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಂಬಾ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ. ಹೀಗಾಗಿ ಯಾವುದೇ ಕಾರಣಕ್ಕೂ ಬೇಲ್ ನೀಡದಂತೆ ವಾದ ಮಂಡಿಸಿದ್ದರು. ಎರಡೂ ಕಡೆ ವಾದ ಪ್ರತಿವಾದ ಆಲಿಸಿದ ನ್ಯಾ. ಮಹೇಶ್ ಬಾಬು, ಇಂದಿಗೆ ಆದೇಶ ಕಾಯ್ದಿರಿದ್ದಾರೆ.