ಬಮೂಲ್‍ದಿಂದ ್ಲ ಕನಕಪುರದಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ಮೆಘಾ ಉತ್ಪನ್ನ ಘಟಕ

ಬೆಂಗಳೂರು, ಸೆ.26-ಬೆಂಗಳೂರು ಸಹಕಾರ ಹಾಲು ಒಕ್ಕೂಟ(ಬಮೂಲ್)ದಿಂದ ಮುಂದಿನ ಮೂರು ತಿಂಗಳಲ್ಲಿ ಕನಕಪುರದಲ್ಲಿ 600 ಕೋಟಿ ರೂ. ವೆಚ್ಚದಲ್ಲಿ ಮೆಘಾ ಉತ್ಪನ್ನ ಘಟಕ ಸ್ಥಾಪನೆಯಾಗಲಿದೆ ಎಂದು ಒಕ್ಕೂಟದ ಅಧ್ಯಕ್ಷ ಬಿ.ಜಿ. ಆಂಜನಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುಜರಾತ್‍ನ ಅಮೂನ್‍ನಲ್ಲಿ ಸದ್ಯ ದಿನಕ್ಕೆ 70 ಟನ್ ಹಾಗೂ ಪುಣೆಯ ಗೋವರ್ಧನ್ ಎಂಬ ಖಾಸಗಿ ಕಂಪನಿಯಲ್ಲಿ 40 ಟನ್ ಚೀಸ್ ತಯಾರಿಸಲಾಗುತ್ತಿದೆ. ನಮ್ಮ ಘಟಕ ಆರಂಭವಾದರೆ ದೇಶದಲ್ಲೇ ಅತಿ ಹೆಚ್ಚು ಚೀಸ್ ಉತ್ಪಾದಿಸುವ ಮೂರನೇ ಘಟಕವಾಗಲಿದೆ ಎಂದು ತಿಳಿಸಿದರು.

ಚೆಡ್ಡರ್, ಮೊಜೆರೆಲ್ಲ, ಪೆÇ್ರಸೆಸ್ಡ್ ಚೀಸ್, ಫ್ಲೆಕ್ಸಿ ಪ್ಯಾಕ್, ಮೊಸರು, ವೇ ಪೌಡರ್, ಕೆನೆ ರಹಿತ ಹಾಲಿನ ಪುಡಿಯನ್ನು ಈ ಘಟಕದಲ್ಲಿ ತಯಾರಿಸಲಾಗುವುದು. ಚೀಸ್ ಉತ್ಪಾದನೆ ಹಾಗೂ ಮಾರಾಟಕ್ಕಾಗಿ ತಮಿಳುನಾಡಿನ ಕೆ.ರತ್ನಂ ಅವರನ್ನು ಸಲಹೆಗಾರರಾಗಿ ನೇಮಿಸಿಕೊಳ್ಳಲಾಗಿದೆ. ಅವರಿಗೆ ವಾರ್ಷಿಕ 1 ಕೋಟಿ ರೂ. ವೇತನ ನಿಗದಿಪಡಿಸಲಾಗಿದೆ ಎಂದು ಹೇಳಿದರು.

ಪ್ರಸ್ತುತ 16 ಲಕ್ಷ ಲೀಟರ್‍ಗೂ ಅಧಿಕ ಹಾಲು ಬಮೂಲ್‍ನಲ್ಲಿ ಸಂಗ್ರಹಿಸುತ್ತಿದ್ದು, 9 ಲಕ್ಷ ಲೀಟರ್ ಹಾಲು, 1 ಲಕ್ಷ ಲೀಟರ್ ಮೊಸರು, 1 ಲಕ್ಷ ಲೀಟರ್ ಇತರೆ ಉತ್ಪನ್ನಗಳಿಗೆ ಬಳಕೆ ಮಾಡುತ್ತಿದ್ದು, ಉಳಿದಂತೆ 6 ಲಕ್ಷ ಲೀಟರ್ ಹಾಲನ್ನು ಹಾಲಿನ ಪುಡಿಯಾಗಿ ಪರಿವರ್ತನೆ ಮಾಡುತ್ತಿದೆ. ಹಾಲಿನ ಪುಡಿ ಮಾಡಲು ಪ್ರತಿ ಲೀಟರ್ ಹಾಲಿಗೆ 10 ರೂ. ನಂತೆ ನಷ್ಟ ಉಂಟಾಗುತ್ತಿರುವುದರಿಂದ ಇದನ್ನು ತಪ್ಪಿಸಲು ಚೀಸ್ ಹಾಗೂ ವೇ-ಪೌಡರ್ ತಯಾರಿಸಲು ನಿರ್ಧರಿಸಲಾಗಿದೆ ಎಂದರು.

15 ಲಕ್ಷ ಶಾಲಾ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಹಾಲಿನ ಪುಡಿಯನ್ನು ಕೆಲವರು ಬಳಸುತ್ತಿಲ್ಲ. ಹೀಗಾಗಿ ಪ್ಲೆಕ್ಸಿ ಪ್ಯಾಕ್‍ನಲ್ಲಿ ಸುವಾಸಿತ ಹಾಲು ನೀಡಲು ನಿರ್ಧರಿಸಲಾಗಿದೆ. ಹಾಲು ಉತ್ಪಾದಕರಿಗೆ ಅಕ್ಟೋಬರ್ 1ರಿಂದ ಪ್ರತಿ ಲೀಟರ್‍ಗೆ ಒಂದು ರೂ.ಹೆಚ್ಚುವರಿ ದರ ನೀಡಲು ನಿರ್ಧರಿಸಲಾಗಿದೆ. ಪ್ರಸ್ತುತ ಲೀಟರ್‍ಗೆ ರೈತರಿಗೆ 23 ರೂ. ದರ ನೀಡುತ್ತಿದ್ದು, ಅ. 1ರಿಂದ 24 ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.
2017-18ನೇ ಸಾಲಿನಲ್ಲಿ ಒಟ್ಟು 2080 ಕೋಟಿ ರೂ. ಆರ್ಥಿಕ ವಹಿವಾಟು ನಡೆಸಿರುವ ಬಮೂಲ್ 18.68 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಶೇ. 25ರಷ್ಟು ಬೋನಸ್ ಮತ್ತು ಶೇ. 8.78ರಷ್ಟು ಡಿವಿಡೆಂಟ್ ನೀಡಲಾಗುತ್ತಿದೆ ಎಂದು ಹೇಳಿದರು.
ಹಾಲು ಉತ್ಪಾದಕ ಸಂಘದ ರೈತರು ಮೃತಪಟ್ಟರೆ 2 ಲಕ್ಷ ಪರಿಹಾರ ನೀಡಲಾಗುತ್ತಿದೆ. ಸದ್ಯ ಈ ಸೌಲಭ್ಯವು ಬಮುಲ್ ವ್ಯಾಪ್ತಿಯ ಹಾಲು ಉತ್ಪಾದಕರಿಗೆ ಸಿಗಲಿದೆ ಎಂದು ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಹೇಳಿದರು.
ಒಕ್ಕೂಟದ ನಿರ್ದೇಶಕರಾದ ಪಂಚಲಿಂಗಯ್ಯ, ಶ್ರೀನಿವಾಸ್, ತಿಮ್ಮರಾಜು, ವ್ಯವಸ್ಥಾಪಕ ನಿರ್ದೇಶಕ ಡಿ.ಸಿ. ನಾಗರಾಜಯ್ಯ ಮತ್ತಿತರರು ಉಪಸ್ಥಿತರಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ