ನೀರು ನುಗ್ಗಿದ ಪ್ರದೇಶಗಳಲ್ಲಿ ಕಟ್ಟೆಚ್ಚರ: ಮೇಯರ್ ಸಂಪತ್‍ರಾಜ್

ಬೆಂಗಳೂರು, ಸೆ.25- ನಗರದಲ್ಲಿ ಸುರಿದ ಮಳೆ ಹಿನ್ನೆಲೆಯಲ್ಲಿ ಈವರೆಗೆ ಯಾವುದೇ ಪ್ರಾಣಹಾನಿಯಾಗಿಲ್ಲ. ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರನ್ನು ಹೊರಹಾಕಲಾಗಿದೆ. ಎಲ್ಲ ಮಾಹಿತಿಯನ್ನು ಉಸ್ತುವಾರಿ ಸಚಿವರಿಗೆ ನೀಡಿದ್ದೇನೆ ಎಂದು ಮೇಯರ್ ಸಂಪತ್‍ರಾಜ್ ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಡರಾತ್ರಿ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ನೀರು ನುಗ್ಗಿದ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮಧ್ಯರಾತ್ರಿವರೆಗೆ ನಾನು ಅಧಿಕಾರಿಗಳ ಜತೆ ಇದ್ದು, ಸ್ಥಳದಲ್ಲೇ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದೇವೆ. ನಿನ್ನೆ ಉಪಮುಖ್ಯಮಂತ್ರಿಗಳು ನನಗೆ ಹಾಗೂ ಅಧಿಕಾರಿಗಳಿಗೆ ಕರೆ ಮಾಡಿ ಮಳೆ ಹಾನಿ ಬಗ್ಗೆ ಮಾಹಿತಿ ಪಡೆದರು. ಇಲ್ಲಿಯವರೆಗೆ ಯಾವುದೇ ಪ್ರಾಣಹಾನಿಯಾಗಿಲ್ಲ ಎಂದರು.

ರಸ್ತೆ ಗುಂಡಿಗಳನ್ನು ಮುಚ್ಚುವ ಬಗ್ಗೆ ಹೈಕೋರ್ಟ್ ಆಯೋಗ ರಚಿಸಿದ್ದು, ಮಳೆ ಬಂದ ಕಾರಣ ಗುಂಡಿ ಮುಚ್ಚು ವ ಕೆಲಸಕ್ಕೆ ತೊಂದರೆಯಾಗಿದೆ. ಮಳೆ ನಿಂತ ಕೂಡಲೇ ತ್ವರಿತಗತಿಯಲ್ಲಿ ಗುಂಡಿಗಳನ್ನು ಮುಚ್ಚಲಾಗುವುದು ಎಂದು ಹೇಳಿದರು.
ಹೈಕೋರ್ಟ್ ನೇಮಿಸಿರುವ ನಿಯೋಗದ ಜತೆ ಯಲಹಂಕಕ್ಕೆ ತೆರಳಿ ತಪಾಸಣೆಯಲ್ಲಿ ಭಾಗವಹಿಸಿದ್ದಾಗಿ ಕೂಡ ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ