ಆರ್ ಅಶೋಕ್ ವಿರುದ್ಧ ಎಸಿಬಿ ತನಿಖೆಗೆ ಹೈಕೋರ್ಟ್ ಅಸ್ತು; ಏನಿದು ಪ್ರಕರಣ

ಬೆಂಗಳೂರು: ಬಗರ್ ಹುಕುಂ ಭೂಮಿ ಅಕ್ರಮ ಮಂಜೂರಾತಿ ಪ್ರಕರಣದಲ್ಲಿ ಎಸಿಬಿ ದಾಖಲಿಸಿದ್ದ ಎಫ್ ಐಆರ್ ಅನ್ನು ರದ್ದುಗೊಳಿಸಬೇಕೆಂದು ಕೋರಿ ಬಿಜೆಪಿ ಮಾಜಿ ಸಚಿವ, ಶಾಸಕ ಆರ್.ಅಶೋಕ್ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿರುವ ಹೈಕೋರ್ಟ್, ಎಸಿಬಿ ತನಿಖೆ ನಡೆಸಲು ಹಸಿರು ನಿಶಾನೆ ತೋರಿಸಿದೆ.

ಎಸಿಬಿ ಎಫ್ಐಆರ್ ರದ್ದು ಮಾಡಲು ಮಂಗಳವಾರ ಹೈಕೋರ್ಟ್ ಪೀಠ ನಿರಾಕರಿಸಿದ್ದು, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ತನಿಖೆ ನಡೆಸಬಹುದು ಎಂದು ಕೋರ್ಟ್ ನಿರ್ದೇಶನ ನೀಡಿದೆ.

ಬೆಂಗಳೂರು ಉತ್ತರ ತಾಲೂಕಿನ ಭೂ ಪರಿವರ್ತನೆ ಸಮಿತಿ ಅಧ್ಯಕ್ಷರಾಗಿದ್ದ ಸಮಯದಲ್ಲಿ ಆರ್.ಅಶೋಕ್ ಅವರು . ಸೋಮನಹಳ್ಳಿಯ ಬಗರ್ ಹುಕುಂ ಭೂಪ್ರದೇಶದಲ್ಲಿ 8 ಎಕರೆ ಜಾಗವನ್ನು ಅಕ್ರಮವಾಗಿ ಹಂಚಿಕೆ ಮಾಡಿರುವುದಾಗಿ ಆರೋಪಿಸಲಾಗಿತ್ತು.

ರಾಜಕೀಯ ದುರುದ್ದೇಶದಿಂದ ತನ್ನ ಮೇಲೆ ಸುಳ್ಳು ಆರೋಪ ಹೊರಿಸಿ ದೂರು ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಎಸಿಬಿ ದಾಖಲಿಸಿರುವ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಆರ್.ಅಶೋಕ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಈ ಪ್ರಕರಣದ ಕುರಿತು ಹಿಂದೆ ವಾದ, ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಪೀಠ ತನಿಖೆಗೆ ಮಧ್ಯಂತರ ತಡೆ ನೀಡಿತ್ತು. ಇದೀಗ ಹೈಕೋರ್ಟ್ ಆರ್ ಅಶೋಕ್ ವಿರುದ್ಧ ತನಿಖೆ ನಡೆಸಲು ಎಸಿಬಿಗೆ ಅನುವು ಮಾಡಿಕೊಟ್ಟಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ