ನಾಲ್ಕು ವರ್ಷ ಪೂರೈಸಿದ ‘ಮಾಮ್​’: ಅಂಗಾರಕನ ಅಪರೂಪದ ಛಾಯಾಚಿತ್ರ ಭೂಮಿಗೆ ರವಾನೆ

ನವದೆಹಲಿ: ಮಂಗಳಗ್ರಹದ ಕುರಿತಾದ ಅಧ್ಯಯನಕ್ಕಾಗಿ ಇಸ್ರೋ ಕಳುಹಿಸಿಕೊಟ್ಟಿರುವ ಮಾರ್ಸ್ ಆರ್ಬಿಟರ್ ಮಿಷನ್ (ಮಾಮ್​) ಮಂಗಳಯಾನ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ನಾಲ್ಕು ವರ್ಷಗಳನ್ನು ಪೂರೈಸಿದೆ. ಇನ್ನು ನೌಕೆಯಲ್ಲಿದ್ದ ವರ್ಣಮಯ ಕ್ಯಾಮೆರಾ ಅಂಗಾರಕನ ಮೇಲಿನ ಅಪರೂಪದ ಛಾಯಾಚಿತ್ರಗಳನ್ನು ಭೂಮಿಗೆ ರವಾನಿಸಿದೆ. ಈ ಚಿತ್ರಗಳನ್ನ ಇಸ್ರೋ ತನ್ನ ಟ್ವಿಟ್ಟರ್​ನಲ್ಲಿ ಹಂಚಿಕೊಂಡಿದೆ.

ವರ್ಷದ ಮಾರ್ಚ್ 18 ರಂದು ಮಾಮ್​ ತೆಗೆದ ಫೋಟೋಗಳು. ಮೋಡದ ಮಧ್ಯೆದಲ್ಲಿ ಉಣ್ಣೆಬಟ್ಟೆಯಂತಹ ಉಂಗುರದ  ಸ್ಥಳ ಇದೆಯಲ್ಲವಾ.. ಇದು ಒಲಂಪಸ್ ಮೋನ್ಸ್, ಅತ್ಯುನ್ನತವಾದ ಜ್ವಾಲಾಮುಖಿ. ಇದು ಸೌರಮಂಡಲದ “ಅತಿ ಎತ್ತರದ  ಪರ್ವತ” ಎಂದು ಇಸ್ರೋ ಹರ್ಷವ್ಯಕ್ತಪಡಿಸಿದ್ದು, ಅದನ್ನ  ಟ್ವೀಟ್​ ಕೂಡಾ ಮಾಡಿದೆ.
ಆರು ತಿಂಗಳ ಜೀವಿತಾವಧಿ ಮಾತ್ರ ಎಂದು ಅಂದಾಜಿಸಲಾಗಿದ್ದ ಮಂಗಳಯಾನ ನೌಕೆಯು 2013ರ ನವೆಂಬರ್​ನಲ್ಲಿ ಶ್ರೀಹರಿಕೋಟಾದ ಉಡಾವಣಾ ನೆಲೆಯಿಂದ ಪಿಎಸ್​ಎಲ್​ವಿ ರಾಕೆಟ್ ಮೂಲಕ ಉಡಾಯಿಸಲಾಗಿತ್ತು.  2013ರ ಡಿಸೆಂಬರ್​ನಲ್ಲಿ ಅದು ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ತಪ್ಪಿಸಿಕೊಂಡು ಮಂಗಳನ ಅಂಗಳದತ್ತ ಸಾಗಿತ್ತು.
ಸೆ. 24, 2014ರಂದು ಯಶಸ್ವಿಯಾಗಿ ಮಾಮ್ ಕಕ್ಷೆ  ಸೇರಿತ್ತು. ಕೇವಲ ಆರು ತಿಂಗಳ ಬಾಳ್ವಿಕೆ ಎಂದು ಹೇಳಿದ್ದ ನೌಕೆ, ನಾಲ್ಕು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಹೀಗಾಗಿ ಮತ್ತೆ ಒಂದಿಷ್ಟು ವರ್ಷಗಳ ಕಾಲ ‘ಮಾಮ್ ಮಂಗಳಯಾನ ನಡೆಸಲು ಸಮರ್ಥವಾಗಿದೆ ಎಂಬುದು ಸೆರೆಹಿಡಿದ ಚಿತ್ರಗಳ ಮೂಲಕ ಸಾಬೀತುಪಡಿಸಿದೆ.
ಮೊಟ್ಟಮೊದಲ ಪ್ರಯತ್ನದಲ್ಲೇ ಮಂಗಳನ ಕಕ್ಷೆಯನ್ನು ಯಶಸ್ವಿಯಾಗಿ ತಲುಪಿದ ಮೊದಲ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಯಿತು. ಅಂತೆಯೇ ಈ ಸಾಧನೆ ಮಾಡಿದ ಮೊಟ್ಟಮೊದಲ ಏಷ್ಯನ್ ಹಾಗೂ ವಿಶ್ವದಲ್ಲಿ ನಾಲ್ಕನೇ ಬಾಹ್ಯಾಕಾಶ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪತ್ರವಾಗಿದೆ. ರಷ್ಯಾದ ರಾಸ್‍ಕಾಸ್‍ಮಾಸ್, ನಾಸಾ ಹಾಗೂ ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಗಳು ಈ ಸಾಧನೆ ಮಾಡಿವೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ