ಮಳೆಯಿಂದ ತಗ್ಗುಪ್ರದೇಶಗಳಿಗೆ ನೀರು; ಸಮಸ್ಯೆಗೆ ಶಾಶ್ವತ ಪರಿಹಾರ; ಸೆ.28 ರಂದು ಸಭೆ

ಬೆಂಗಳೂರು, ಸೆ.25-ಬೆಂಗಳೂರಿನಲ್ಲಿ ಮಳೆಯಿಂದ ತಗ್ಗುಪ್ರದೇಶಗಳಿಗೆ ನೀರು ನುಗ್ಗಿ ತೊಂದರೆಯಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ಸೆ.28 ರಂದು ಅಧಿಕಾರಿಗಳ ಸಭೆ ಕರೆಯಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳೀದರು.

ಗೃಹ ಕಚೇರಿ ಕಾವೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಯಾದಾಗ ತಗ್ಗು ಪ್ರದೇಶಗಳು ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗುವುದು ಹೊಸ ಸಮಸ್ಯೆಯಲ್ಲ. ಇದು ಬಹಳ ದಿನಗಳಿಂದಲೂ ನಡೆದುಕೊಂಡು ಬಂದಿದೆ. ಇದಕ್ಕೆ ನಮ್ಮ ಅವಧಿಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳುವ ಚಿಂತನೆ ಇದೆ ಎಂದು ಹೇಳಿದರು.

ಇದು ನಮ್ಮ ಕಾಲದ ಸಮಸ್ಯೆಯಲ್ಲ ಎಂದು ನಾವು ಕೈ ಚೆಲ್ಲಿ ಕೂರುವುದಿಲ್ಲ. ಎಲ್ಲಾ ಹಂತದಲ್ಲೂ ಪರಿಶೀಲನೆ ನಡೆಸುತ್ತೇವೆ. ಏಕಾಏಕಿ ಸಣ್ಣಪುಟ್ಟ ಮನೆಗಳನ್ನು ತೆರವುಗೊಳಿಸುವ ಪ್ರಯತ್ನಕ್ಕೂ ಕೈ ಹಾಕುವುದಿಲ್ಲ. ಮಾನವೀಯತೆ ದೃಷ್ಟಿಯಿಂದ ಬಡವರನ್ನು ಬೀದಿಪಾಲು ಮಾಡದೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ನಮ್ಮ ಚಿಂತನೆ. ರಾಜಕಾಲುವೆ ಒತ್ತುವರಿ ವಿಷಯದಲ್ಲಿ ಸಣ್ಣವರು, ದೊಡ್ಡವರು ಎಂಬ ಬೇಧಭಾವ ನಮಗಿಲ್ಲ. ಅಗತ್ಯ ಇರುವ ಕಡೆ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.

ಬೆಂಗಳೂರಿನ ನಾಗರಿಕರಿಗೆ ಸಂಪೂರ್ಣ ಮೂಲಸೌಲಭ್ಯ ಕಲ್ಪಿಸುವುದು ನಮ್ಮ ಸರ್ಕಾರದ ಗುರಿ. ನಿನ್ನೆ ಭಾರೀ ಮಳೆ ಸುರಿದಾಗ ಸಾಕಷ್ಟು ಪ್ರದೇಶಗಳು ಜಲಾವೃತಗೊಂಡಿವೆ. ತುರ್ತು ಪರಿಹಾರ ಕೈಗೊಳ್ಳುವಂತೆ ಬಿಬಿಎಂಪಿ ಆಯುಕ್ತರು ಮುಂಜಾನೆ 4 ಗಂಟೆಯವರೂ ಬೆಂಗಳೂರಿನಾದ್ಯಂತ ಸಂಚರಿಸಿದ್ದಾರೆ. ನಾನು ಮಧ್ಯರಾತ್ರಿ 1 ಗಂಟೆಯವರೆಗೂ ಎಚ್ಚರವಾಗಿದ್ದು, ಅಧಿಕಾರಿಗಳಿಗೆ ಸಲಹೆ, ಸೂಚನೆ ನೀಡಿದ್ದೇನೆ. ಇದು ತಾತ್ಕಾಲಿಕವಾಗಿದ್ದು, ಶಾಶ್ವತ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಅದಕ್ಕಾಗಿ ನಮ್ಮ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ