
ಬೆಂಗಳೂರು, ಸೆ.25- ಬಿ.ಕೆ.ಪವಿತ್ರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಸ್ಸಿ-ಎಸ್ಟಿ ಸಮುದಾಯದ ಹಿತರಕ್ಷಣೆಗೆ 2017ರಲ್ಲಿ ತಿದ್ದುಪಡಿ ಮಾಡಿರುವ ಬಡ್ತಿ ಮೀಸಲಾತಿ ಕಾಯ್ದೆಯನ್ನು ಒಂದೆರಡು ದಿನಗಳಲ್ಲಿ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.
ಗೃಹ ಕಚೇರಿ ಕೃಷ್ಣಾದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಷಯ ಗಂಭೀರವಾಗಿ ಚರ್ಚೆಯಾಗಿದೆ. ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಸಚಿವ ಪ್ರಿಯಾಂಕ್ ಖರ್ಗೆ ಸಾಕಷ್ಟು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಕಾಯ್ದೆ ಜಾರಿ ವಿಳಂಬದಿಂದ ಕೆಲವು ಅಧಿಕಾರಿಗಳಿಗೆ ತೊಂದರೆಯಾಗುತ್ತಿದೆ ಎಂಬ ಅಸಮಾಧಾನವಿದೆ. ಆದರೆ ಪ್ರಕರಣದ ವಿಚಾರಣೆ ಸುಪ್ರೀಂಕೋರ್ಟ್‍ನಲ್ಲಿದೆ.
ಪ್ರತಿವಾದಿಗಳು ಮೇಲ್ಮನವಿ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಸುಪ್ರೀಂಕೋರ್ಟ್‍ನ ತೀರ್ಪು ಯಾವ ರೀತಿ ಬರಲಿದೆ ಎಂಬುದು ಗೊತ್ತಿಲ್ಲ. ಸುಪ್ರೀಂಕೋರ್ಟ್ ತೀರ್ಪಿನ ಪರಿಣಾಮಗಳಿಗೆ ಬದ್ಧವಾಗಿ ಬಡ್ತಿ ಮೀಸಲಾತಿ ಕಾಯ್ದೆಯನ್ನು ಜಾರಿಗೊಳಿಸುವ ಕುರಿತು ಪರಿಶೀಲನೆ ನಡೆದಿದ್ದು, ಮುಖ್ಯ ಕಾರ್ಯದರ್ಶಿಯವರಿಂದ ವರದಿ ಕೇಳಲಾಗಿದೆ. ರಾಷ್ಟ್ರಪತಿಗಳಿಂದ ಅಂಕಿತ ಬಂದಿರುವ ಈ ಕಾಯ್ದೆಯನ್ನು ಒಂದೆರಡು ದಿನಗಳೊಳಗಾಗಿ ಜಾರಿಗೊಳಿಸಲು ಪ್ರಯತ್ನಿಸುವುದಾಗಿ ಕುಮಾರಸ್ವಾಮಿ ಹೇಳಿದರು.