ಶೀಮ್ಲಾ: ಟ್ರೆಕಿಂಗ್ ಗೆ ತೆರಳಿದ್ದ 45 ಮಂದಿ ಐಐಟಿ ವಿದ್ಯಾರ್ಥಿಗಳೂ ಸೇರಿ, ಭಾರೀ ಹಿಮಪಾತಕ್ಕೆ ಸಿಲುಕಿ ಸಂಕಷ್ಟಕ್ಕೀಡಾಗಿದ್ದ 300 ಮಂದಿ ಸುರಕ್ಷಿತರಾಗಿದ್ದಾರೆ ಎಂದು ಹಿಮಾಚಲ ಪ್ರದೇಶ ಸರ್ಕಾರ ಮಾಹಿತಿ ನೀಡಿದೆ.
ಭಾರೀ ಹಿಮಮಳೆಗೆ ಸಿಲುಕಿ 45 ಐಐಟಿ ವಿದ್ಯಾರ್ಥಿಗಳು ಸೇರಿ ಹಲವರು ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿತ್ತು. ಈ ಹಿನ್ನಲೆಯಲ್ಲಿ ಮಾಹಿತಿ ನೀಡಿರುವ ಹಿಮಾಚಲ ಪ್ರದೇಶ ಸರ್ಕಾರದ ಅಧಿಕಾರಿ, ಐಐಟಿ ವಿದ್ಯಾರ್ಥಿಗಳೂ ಸೇರಿ 3೦೦ ಜನರು ಸುರಕ್ಷಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಪಲಾಹೌಲ್ ಮತ್ತು ಸ್ಪಿತಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಐಐಟಿ ರೂರ್ಕಿ ವಿದ್ಯಾರ್ಥಿಗಳು ಹಾಗೂ ಹಲವು ಪ್ರವಾಸಿಗರು ಸಿಲುಕಿಕೊಂಡಿದ್ದರು. ರೊಹ್ತಾಂಗ್ ಪಾಸ್ ಹಾಗೂ ಒಳನಾಡಿನ ರಸ್ತೆಗಳು ಹಿಮಾವೃತಗೊಂಡು ಬಂದ್ ಆಗಿವೆ. ಹಮ್ತಾ ಪಾಸ್‌ಗೆ ಚಾರಣ ಹೋಗಿದ್ದ 45 ಐಐಟಿ ವಿದ್ಯಾರ್ಥಿಗಳು ಮನಾಲಿಗೆ ಹಿಂದಿರುಗಬೇಕಿತ್ತು. ಆದರೆ, ರಸ್ತೆಗಳು ಮುಚ್ಚಿ ಹೋಗಿರುವುದು ಹಾಗೂ ಹವಾಮಾನ ವೈಪರೀತ್ಯದಿಂದ ವಿದ್ಯಾರ್ಥಿಗಳು ಹಾಗೂ ಇತರೆ ಪ್ರವಾಸಿಗರು ಹಿಮಾಚಲದ ಅನೇಕ ಭಾಗಗಳಲ್ಲಿ ಸಿಲುಕಿರುವುದಾಗಿ ಕೆಲಾಂಗ್ ಉಪ ವಿಭಾಗದ ಮ್ಯಾಜಿಸ್ಟ್ರೇಟ್ ಅಮರ್ ನೇಗಿ ಮಾಹಿತಿ ನೀಡಿದ್ದಾರೆ.
ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆತರಲು ಭಾರತೀಯ ವಾಯುಪಡೆಯ ಎರಡು ಹೆಲಿಕಾಪ್ಟರ್‌ಗಳ ಸಹಕಾರ ಪಡೆಯಲಾಗಿದ್ದು, ವಿವಿಧ ಕಡೆ ಸಿಲುಕಿರುವ ಜನರಿಗೆ ಆಹಾರ ಮತ್ತು ಸೂರಿನ ವ್ಯವಸ್ಥೆಯನ್ನು ಜಿಲ್ಲಾಡಳಿತ ಒದಗಿಸುತ್ತಿದೆ. ಹಿಮಪಾತದಿಂದ ಪರಿಸ್ಥಿತಿಯ ಅವಲೋಕನ ನಡೆಸಲು ಮುಖ್ಯಮಂತ್ರಿ ಜೈರಾಮ್ ಠಾಕೂರ್ ಜಿಲ್ಲೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿಸಿದರು.
ದೇಶದ ಗಡಿ ಭಾಗದ ರಸ್ತೆಗಳ ಸಂಪರ್ಕ ವ್ಯವಸ್ಥೆ ನಿರ್ವಹಿಸುವ ಬಿಆರ್‌ಒ(ಬಾರ್ಡರ್ ರೋಡ್ ಆರ್ಗನೈಜೇಷನ್), ಈಗಾಗಲೇ ಕಿಲಾಂಗ್–ಸ್ಟಿಂಗ್ರಿ ಮಾರ್ಗದಲ್ಲಿ 6 ಕಿ.ಮೀ. ರಸ್ತೆ ಸಂಪರ್ಕ ಮರುಕಲ್ಪಿಸಿದೆ. ಟ್ರಕ್‌ಗಳಲ್ಲಿ ಸಂಚರಿಸಿರುವವರು, ಪ್ರವಾಸಿಗರು ಹಾಗೂ ಬಿಆರ್‌ಒನ ಜನರಲ್ ರಿಸರ್ವ್ ಎಂಜಿನೀರ್ ಫೋರ್ಸ್(ಜಿಆರ್‌ಎಫ್‌ಎಫ್) ಸಿಬ್ಬಂದಿ ಸಹ ಜಿಲ್ಲೆಯ ಅನೇಕ ಕಡೆ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.