ಜನಪ್ರತಿನಿಧಿಗಳು ವಕೀಲ ವೃತ್ತಿ ಮುಂದುವರೆಸಬಹುದು: ಸುಪ್ರೀಂ ತೀರ್ಪು

ನವದೆಹಲಿ: ಸಂಸದ, ಶಾಸಕ ಅಥವಾ ಪರಿಷತ್​ ಸದಸ್ಯರಾಗಿ ಆಯ್ಕೆಯಾದ ಯಾವುದೇ ವಕೀಲರು ತಮ್ಮ ಅಧಿಕಾರವಧಿಯಲ್ಲಿ ವಕೀಲ ವೃತ್ತಿಯನ್ನು ಮುಂದುವರಿಸಬಹುದು ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.

ಜನಪ್ರತಿನಿಧಿಗಳಾಗಿ ಆಯ್ಕೆಯಾದವರನ್ನು ವಕೀಲ ವೃತ್ತಿಯಿಂದ ನಿರ್ಬಂಧಿಸಬೇಕು ಎಂದು ಕೋರಿ ಬಿಜೆಪಿಯ ಮುಖಂಡ ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ, ನಿರ್ಬಂಧ ಹೇರುವ ಕಾನೂನನ್ನು ಭಾರತೀಯ ವಕೀಲರ ಪರಿಷತ್​ ರೂಪಿಸಿಲ್ಲ,”ಎಂದು  ಅಭಿಪ್ರಾಯ ಪಟ್ಟಿದೆ.

ಅರ್ಜಿದಾರರಾದ ಉಪಾದ್ಯಾಯ ಪರ ಕೋರ್ಟ್​ಗೆ ಹಾಜರಾಗಿದ್ದ ವಕೀಲ ಶೇಖರ್​ ನಾಫ್ಡೆ, ” ಜನಪ್ರತಿನಿಧಿಗಳು ಸಾರ್ವಜನಿಕರ ಹಣವನ್ನೇ ವೇತನವಾಗಿ ಪಡೆಯುತ್ತಿದ್ದಾರೆ. ಅದಾಗಲೇ ವೇತನ ಪಡೆಯುತ್ತಿರುವ ವ್ಯಕ್ತಿಯು ವಕೀಲ ವೃತ್ತಿ ನಡೆಸುವುದಕ್ಕೆ ಭಾರತೀಯ ವಕೀಲರ ಪರಿಷತ್​ ನಿರ್ಬಂಧಿಸಿದೆ,” ಎಂದು ವಾದ ಮಂಡಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಉದ್ಯೋಗ ಎಂಬುದು ಉದ್ಯೋಗದಾತ ಮತ್ತು ನೌಕರನ ಸಂಬಂಧವನ್ನು ಪ್ರತಿಪಾದಿಸುತ್ತದೆ. ಆದರೆ, ಸಂಸದರ ವಿಚಾರದಲ್ಲಿ ಸರ್ಕಾರ ಉದ್ಯೋಗದಾತನೂ ಅಲ್ಲ, ಸಂಸದ ನೌಕರನೂ ಅಲ್ಲ ಎಂದು ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ