
ನವದೆಹಲಿ: ಕಳಂಕಿತ ರಾಜಕಾರಣಿಗಳು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನುನಿರ್ಬಂಧಿಸಲು ಸಂಸತ್ತು ಸೂಕ್ತ ಕಾನೂನನ್ನು ರೂಪಿಸಬೇಕು ಎಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ತೀರ್ಪು ನೀಡಿದ್ದಾರೆ.
ದೋಷಾರೋಪ ಎದುರಿಸುತ್ತಿರುವವರ ಸ್ಪರ್ಧೆಗೆ ನಿರ್ಬಂಧ ಹೇರಬೇಕು ಮತ್ತು ಅಂತಹ ಅಭ್ಯರ್ಥಿಗಳನ್ನು ಅನರ್ಹಗೊಳಿಸಬೇಕೆಂಬ ಅರ್ಜಿಗೆ ಸಂಬಂಧಿಸಿದಂತೆ ದೀಪಕ್ ಮಿಶ್ರಾ ಅವರು ತೀರ್ಪು ನೀಡಿದ್ದು ಚಾರ್ಚ್ ಶೀಟ್ ಆಧರಿಸಿ ಅಭ್ಯರ್ಥಿಗಳನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಕಳಂಕಿತ ರಾಜಕಾರಣಿಗಳ ಸ್ಪರ್ಧೆ ಕುರಿತಂತೆ ಸಂಸತ್ ನಲ್ಲಿ ನಿರ್ಧಾರ ಕೈಗೊಳ್ಳಬೇಕು. ಈ ಕುರಿತು ಕಾನೂನು ರೂಪಿಸಬೇಕು. ಇನ್ನು ಜನರೇ ರಾಜಕಾರಣಿಗಳ ಹಣೆಬರಹ ನಿರ್ಧರಿಸಬೇಕು. ಕಳಂಕ ರಹಿತ ಅಭ್ಯರ್ಥಿಗಳನ್ನು ಚುನಾಯಿಸುವ ಅಧಿಕಾರ ಮತದಾರರಿಗಿರುವುದರಿಂದ ಅವರೇ ಉತ್ತಮ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಹೇಳಿದರು.
ಅಲ್ಲದೇ ಕಳಂಕಿತ ರಾಜಕೀಯ ನಾಯಕರು ಚುನಾವಣೆಯಲ್ಲಿ ಸ್ಪರ್ಧಿಸುವ ಮುನ್ನ ತಮ್ಮ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಬೇಕು. ಮತದಾರರಿಗೆ ಅಭ್ಯರ್ಥಿಗಳು ತಮ್ಮ ಮೇಲಿನ ಕ್ರಿಮಿನಲ್ ಕೇಸ್ ಗಳ ಕುರಿತು ಮಾಧ್ಯಮ, ಸಾಮಾಜಿಕ ಜಾಲಾತಣಗಳ ಮೂಲಕ ಮಾಹಿತಿ ನೀಡಬೇಕು ಎಂದರು.
ಭ್ರಷ್ಟಾಚಾರ ಒಂದು ರಾಷ್ಟ್ರೀಯ ಆರ್ಥಿಕ ಭಯೋತ್ಪಾದನೆಯಾಗಿದೆ. ಇದನ್ನು ಮಟ್ಟ ಹಾಕುವುದು ಮತದಾರರ ಕೈಯಲ್ಲಿದೆ ಎಂದು ನ್ಯಾಯಾಧೀಶ ದೀಪಕ್ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.