ಬೆಂಗಳೂರು, ಸೆ.24- ವಾತಾವರಣದಲ್ಲಿ ಉಂಟಾದ ಬದಲಾವಣೆಯಿಂದ ಗಾಳಿಯ ಒತ್ತಡ ಕಡಿಮೆಯಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಿದೆ.
ಬೆಂಗಳೂರಿನಲ್ಲಿ ನಿನ್ನೆ ರಾತ್ರಿಯಿಂದ ಇಂದು ಬೆಳಗ್ಗೆವರೆಗೂ ಎಡೆಬಿಡದೆ ಮಳೆ ಬಿದ್ದಿದ್ದು, ಕೆಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವೆಡೆ ರಸ್ತೆಗಳಲ್ಲಿ ಕಾಲುವೆಯಂತೆ ನೀರು ತುಂಬಿತ್ತು. ಕೆಲವೆಡೆ ಮರಗಳು ಕೂಡ ಮುರಿದುಬಿದ್ದಿವೆ.
ಇಂದು ಬೆಳಗ್ಗೆ ಮಳೆ ಮುಂದುವರೆದಿದ್ದರಿಂದ ದೈನಂದಿನ ಕೆಲಸ ಕಾರ್ಯಗಳಿಗೆ ಹೋಗುವವರಿಗೆ, ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ, ವ್ಯಾಪರಸ್ಥರಿಗೆ ತೊಂದರೆ ಉಂಟಾಯಿತು. ಮಳೆಯಿಂದಾಗಿ ನಗರದ ಹಲವು ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಸಮಸ್ಯೆ ಎದುರಿಸುವಂತಾಯಿತು.
ಬೆಂಗಳೂರಿನ ಅಂಜನಾಪುರ ಬಡಾವಣೆಯಲ್ಲಿ 205 ಮಿಲಿಮೀಟರ್ನಷ್ಟು ಭಾರೀ ಪ್ರಮಾಣದ ಮಳೆ ಬಿದ್ದ ವರದಿಯಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸರೆಡ್ಡಿ ತಿಳಿಸಿದರು.
ಇದೇ ರೀತಿ ಕೆಂಗೇರಿ, ಉತ್ತರಹಳ್ಳಿಯಲ್ಲೂ 150 ಮಿಲಿಮೀಟರ್ನಷ್ಟು ಹೆಚ್ಚು ಮಳೆಯಾಗಿದೆ. ಬೆಂಗಳೂರು ನಗರದಲ್ಲಿ ಸರಾಸರಿ 46 ಮಿಲಿಮೀಟರ್ನಷ್ಟು ವ್ಯಾಪಕ ಪ್ರಮಾಣದ ಮಳೆಯಾಗಿದೆ.
ಬೆಂಗಳೂರಿನ ದಕ್ಷಿಣ ಭಾಗದಲ್ಲಿ ನಿನ್ನೆ ರಾತ್ರಿಯಿಂದ ಹೆಚ್ಚಿನ ಪ್ರಮಾಣದ ಮಳೆಯಾಗಿದೆ. ಈ ಮಳೆಗೆ ಚಂಡಮಾರುತ ಕಾರಣವಲ್ಲ. ರಾಜ್ಯದ ದಕ್ಷಿಣ ಭಾಗ, ತಮಿಳುನಾಡು ಹಾಗೂ ಕೇರಳ ಭಾಗದಲ್ಲಿ ಗಾಳಿಯ ಒತ್ತಡ (ವಿಂಡ್ ಬ್ರೇಕ್) ಕಡಿಮೆಯಾಗಿ ವ್ಯಾಪಕ ಪ್ರಮಾಣದ ಮಳೆಯಾಗುತ್ತಿದೆ. ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಭಾಗಶಃ ಕೋಲಾರ, ತುಮಕೂರು, ಚಿತ್ರದುರ್ಗ, ರಾಮನಗರ, ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಉತ್ತಮ ಮಳೆಯಾದ ವರದಿಯಾಗಿದೆ.
ಹವಾಮುನ್ಸೂಚನೆ ಪ್ರಕಾರ ಇಂದು ಮತ್ತು ನಾಳೆ ಇದೇ ರೀತಿ ಮೋಡ ಮುಸುಕಿದ ವಾತಾವರಣ ಕಂಡು ಬರಲಿದ್ದು, ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ. ಮುಂಗಾರು ಮತ್ತೆ ಚೇತರಿಸಿಕೊಂಡಿದ್ದು ನಾಳೆಯಿಂದ ಮೂರು ದಿನಗಳ ಕಾಲ ರಾಜ್ಯದ ಹಲವೆಡೆ ಚದುರಿದಂತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಶ್ರೀನಿವಾಸ್ರೆಡ್ಡಿ ತಿಳಿಸಿದರು.