ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ ಶಾಕ್‍ನಿಂದ ವಿಧಾನಪರಿಷತ್ ಉಪಚುನಾವಣಾ ಕಣದಿಂದ ಹಿಂದೆ ಸರಿದ ಬಿಜೆಪಿ

ಬೆಂಗಳೂರು, ಸೆ.24- ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ ಶಾಕ್‍ನಿಂದ ವಿಧಾನಪರಿಷತ್ ಉಪಚುನಾವಣಾ ಕಣದಿಂದ ಹಿಂದೆ ಸರಿಯುವಂತಾಗಿದೆ.
ಅ.4ರಂದು ವಿಧಾನಸಭೆಯಿಂದ ವಿಧಾನಪರಿಷತ್ ನಡೆಯಲಿರುವ ಮೂರು ಸ್ಥಾನಗಳ ಉಪಚುನಾವಣೆಯಲ್ಲಿ ಬಿಜೆಪಿ ಐವರು ಶಾಸಕರು ಅಡ್ಡಮತದಾನ ಮಾಡಬಹುದೆಂಬ ಭೀತಿಯಿಂದಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ತೀರ್ಮಾನವನ್ನು ಕೈ ಬಿಡಲಾಯಿತು.

ಮೂಲಗಳ ಪ್ರಕಾರ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ಬಿಜೆಪಿಯ ಐದು ಶಾಸಕರು ಸತತ ಸಂಪರ್ಕದಲ್ಲಿದ್ದರು. ಚುನಾವಣಾ ಸಂದರ್ಭದಲ್ಲಿ ಇವರೆಲ್ಲರೂ ಅಡ್ಡಮತದಾನ ಮಾಡಿದರೆ ಪಕ್ಷಕ್ಕೆ ಮುಖಭಂಗವಾಗಬಹುದೆಂಬ ಭೀತಿಯಿಂದ ಕೊನೆ ಕ್ಷಣದಲ್ಲಿ ಹಿಂದೆ ಸರಿಯಿತು.
ಸೋಮವಾರ ಮಧ್ಯಾಹ್ನ 12 ಗಂಟೆಯವರೆಗೂ ಬಿಜೆಪಿಯ ಮಾಜಿ ಶಾಸಕರಾದ ಸಿ.ಪಿ.ಯೋಗೇಶ್ವರ್, ಮಾಲೀಕಯ್ಯ ಗುತ್ತಿದಾರ್ ಹಾಗೂ ವಿಧಾನಪರಿಷತ್‍ನ ಮಾಜಿ ಸದಸ್ಯ ಬಿ.ಜೆ.ಪುಟ್ಟಸ್ವಾಮಿ ಅವರನ್ನು ಪಕ್ಷದಿಂದ ಕಣಕ್ಕಿಳಿಸಲು ತೀರ್ಮಾನಿಸಿತ್ತು.

ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿರುವ ಕೆಲವು ಅಸಮಾಧಾನಿತ ಶಾಸಕರನ್ನು ಸೆಳೆದು ಚುನಾವಣೆಯಲ್ಲಿ ಅಡ್ಡಮತದಾನ ಮಾಡಿಸುವುದು ಬಿಜೆಪಿಯ ಲೆಕ್ಕಾಚಾರವಾಗಿತ್ತು. ಆದರೆ, ಇದರ ಸುಳಿವು ಅರಿತ ಕುಮಾರಸ್ವಾಮಿ ಅವರು ಬಿಜೆಪಿಗೆ ಆಪರೇಷನ್ ನಡೆಸಲು ಸಜ್ಜಾಗಿದ್ದರು.
ಮೂಲತಃ ಜನತಾ ಪರಿವಾರದಿಂದ ರಾಜಕೀಯ ಜೀವನ ಆರಂಭಿಸಿದ್ದ ಇವರೆಲ್ಲರೂ ಈಗಲೂ ಕುಮಾರಸ್ವಾಮಿ ಅವರ ಜತೆ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದಾರೆ. ಇದೆಲ್ಲವನ್ನೂ ಗಮನಿಸಿದ ಸಿಎಂ, ಬಿಜೆಪಿ ತಂತ್ರಕ್ಕೆ ಪ್ರತಿ ತಂತ್ರ ಎಣೆದಿದ್ದರು.

ಈ ಹಿಂದೆ ರಾಜ್ಯಸಭೆ ಚುನಾವಣೆಯಲ್ಲಿ ವಿಜಯ್‍ಮಲ್ಯ ಸ್ಪರ್ಧಿಸಿದ್ದಾಗ ಬಿಜೆಪಿಯ ಕೆಲವು ಶಾಸಕರು ಅಡ್ಡಮತದಾನ ನಡೆಸಿದ್ದರು. ಈಗ ಅದೇ ಇತಿಹಾಸ ಪುನರಾವರ್ತನೆಯಾಗಬಹುದೆಂಬ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕರನ್ನು ಹಿಡಿದಿಟ್ಟುಕೊಳ್ಳುವ ಎಚ್ಚರಿಕೆಯ ಹೆಜ್ಜೆಯಾಗಿ ಈ ತೀರ್ಮಾನ ಕೈಗೊಂಡಿದೆ.
ಕಾಂಗ್ರೆಸ್‍ನ ಒಡಕಿನ ಲಾಭವನ್ನು ಪಡೆದು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಬಿಜೆಪಿ ಕೈ ಹಾಕಿದೆ ಎಂಬುದು ಖಚಿತವಾದ ನಂತರವೇ ಕುಮಾರಸ್ವಾಮಿ ಕಮಲ ಪಕ್ಷದ ಶಾಸಕರನ್ನು ಸೆಳೆಯಲು ಮುಂದಾದರು.
ಮುಂದೆ ಇದು ಪಕ್ಷಕ್ಕೆ ದೊಡ್ಡ ಹೊಡೆತ ಕೊಡಬಹುದೆಂಬ ಹಿನ್ನೆಲೆಯಿಂದಾಗಿ ಬಿಜೆಪಿ ತನ್ನ ಪ್ರಯತ್ನದಿಂದ ಹಿಂದೆ ಸರಿದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ