ಶಾಸಕರಿಗೆ ಹೈಕಮಾಂಡ್ ಕಠಿಣ ಎಚ್ಚರಿಕೆ

ಬೆಂಗಳೂರು, ಸೆ.23- ಸಚಿವ ಸ್ಥಾನ ಸಿಗದೆ ಇದ್ದರೆ ಬಿಜೆಪಿಗೆ ಹೋಗುತ್ತೇವೆ ಎಂದು ಹೇಳಿಕೊಳ್ಳುತ್ತಾ ನೆರೆ ರಾಜ್ಯಗಳಲ್ಲಿ ಪ್ರವಾಸ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಬ್ಲಾಕ್‍ಮೇಲ್ ಮಾಡುತ್ತಿದ್ದ ಶಾಸಕರಾದ ಡಾ.ಸುಧಾಕರ್ ಮತ್ತು ಎಂಟಿಬಿ ನಾಗರಾಜ್ ಅವರಿಗೆ ಹೈಕಮಾಂಡ್ ಕಠಿಣ ಎಚ್ಚರಿಕೆ ನೀಡಿದೆ.
ಇಬ್ಬರು ಅತೃಪ್ತ ಶಾಸಕರ ಎಲ್ಲೆಲ್ಲಿ ಪ್ರವಾಸ ಮಾಡಿದ್ದಾರೆ, ಯಾರನ್ನೇಲ್ಲಾ ಸಂಪರ್ಕಿಸಿದ್ದಾರೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದೆ.
ಕಾಂಗ್ರೆಸ್ ಶಾಸಕರು ಕುಟುಂಬದ ಜೊತೆ ಅಥವಾ ಮೋಜಿಗಾಗಿ ಪ್ರವಾಸ ಮಾಡಿದ್ದರೆ ಅದನ್ನು ಗಂಭೀರವಾಗಿ ಪರಿಗಣಿಸವುದಿಲ್ಲ. ಒಂದು ವೇಳೆ ರಾಜಕೀಯ ಕಾರಣಕ್ಕಾಗಿಯೇ ಪ್ರವಾಸ ತೆರಳಿದ್ದರೆ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವುದಾಗಿ ಎಚ್ಚರಿಸಲಾಗಿದೆ.

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ. ಯಾರಾರಾದರೂ ಬ್ಲಾಕ್ ಮೇಲ್ ಮಾಡಲು ಮುಂದಾದರೆ ಸಹಿಸುವುದಿಲ್ಲ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಸಿಸಿ ಉಸ್ತುವಾರಿ ನಾಯಕ ಕೆ.ಸಿ.ವೇಣುಗೋಪಾಲ್ ನೇರ ಎಚ್ಚರಿಕೆ ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್ ಕೂಡ ಇದೇ ಎಚ್ಚರಿಕೆಯನ್ನು ರವಾನಿಸಿದ್ದು, ಶಾಸಕರು ಶಿಸ್ತನ್ನು ಉಲ್ಲಂಘಿಸಿ ಸರ್ಕಾರಕ್ಕೆ ಮುಜುಗರವಾಗುವಂತೆ ನಡೆದುಕೊಂಡರೆ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಕೆಪಿಸಿಸಿ ಕಚೇರಿಯ ಮುಂಭಾಗದಲ್ಲಿ ನಡೆದ ಮಹಿಳಾ ಕಾಂಗ್ರೆಸ್ ಘಟಕದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿದ್ದುಕೊಂಡೇ ಬ್ಲ್ಯಾಕ್‍ಮೇಲ್ ತಂತ್ರಗಳನ್ನು ಅನುಸರಿಸುವುದನ್ನು ಮಾಡಿದರೆ ಸಹಿಸುವುದಿಲ್ಲ. ಶಿಸ್ತು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಬಿಜೆಪಿಯವರು ಕೆಟ್ಟ ರಾಜಕೀಯ ಮಾಡುತ್ತಿದ್ದಾರೆ. ನಮ್ಮ ಶಾಸಕರಿಗೆ ಯಡಿಯೂರಪ್ಪ ಹಣದ ಆಮಿಷವೊಡ್ಡುತ್ತಿದ್ದಾರೆ. ಬಿಜೆಪಿಯವರ ಕೆಟ್ಟ ರಾಜಕಾರಣವನ್ನು ಕರ್ನಾಟಕದ ಜನತೆ ಸಹಿಸುವುದಿಲ್ಲ. ಯಾವೊಬ್ಬ ಶಾಸಕರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ಹೇಳಿದರು.
ನಂತರ ಖಾಸಗಿ ಹೊಟೇಲ್‍ನಲ್ಲಿ ನಡೆದ ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಮುಂಚೂಣಿ ಘಟಕದ ಅಧ್ಯಕ್ಷರನ್ನುದ್ದೇಶಿಸಿ ಇದೇ ಧಾಟಿಯಲ್ಲಿ ಮಾತನಾಡಿದ ಅವರು, ಪಕ್ಷದ ವೇದಿಕೆಯಲ್ಲಿ ಚರ್ಚಿಸಬಹುದಾದ ಯಾವುದೇ ವಿಷಯಗಳನ್ನು ಬಹಿರಂಗವಾಗಿ ಚರ್ಚಿಸುವುದು ಬೇಡ. ನಾವು ಸಮ್ಮಿಶ್ರ ಸರ್ಕಾರದ ಸೂಕ್ಷ್ಮ ಸನ್ನಿವೇಶದಲ್ಲಿದ್ದೇವೆ. ಮಾಧ್ಯಮಗಳಲ್ಲಿ ಬರುವುದೆಲ್ಲ ನಿಜವಾಗಿರುವುದಿಲ್ಲ. ಕಾರ್ಯಕರ್ತರು ನಿರಾಸೆ ಮತ್ತು ಹತಾಶೆಗೊಳಗಾಗುವುದು ಬೇಡ ಎಂದು ಹೇಳಿದರು.

ಸಮ್ಮಿಶ್ರ ಸರ್ಕಾರ ಅಸ್ಥಿರವಾಗುವುದಿಲ್ಲ. ಐದು ವರ್ಷಗಳ ಕಾಲ ಸ್ಥಿರ ಆಡಳಿತ ನಡೆಸುತ್ತದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಕಡೆ ನಾವು ಗಮನಹರಿಸಬೇಕಿದೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ -ಬಾಂಧವ್ಯ ಗಟ್ಟಿಯಾಗಿದೆ. ವಿಪಕ್ಷಗಳ ತಂತ್ರಗಾರಿಕೆ ನಡೆಯುವುದಿಲ್ಲ. ತಮ್ಮ ಯಾವುದೇ ಅಸಮಾಧಾನ, ಅತೃಪ್ತಿ ಇದ್ದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಅದಕ್ಕೆ ಪರಿಹಾರ ಕಂಡುಕೊಳ್ಳೋಣ. ಬಹಿರಂಗ ಚರ್ಚೆ ಮಾಡುವುದು ಬೇಡ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ