ಬೆಂಗಳೂರು, ಸೆ.23- ಅಂತಾರಾಷ್ಟ್ರೀಯ ಶಾಂತಿದಿನದ ಅಂಗವಾಗಿ ಕಳೆದ ಎರಡು ದಿನಗಳ ಹಿಂದೆ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಪ್ರೇಮ್ ರಾವತ್ ಅವರ ಶಾಂತಿ ಸಂದೇಶ ಸಾರುವ ಪ್ರವಚನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಜ್ ವಿದ್ಯಾಕೇಂದ್ರದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ಸ್ವಯಂಸೇವಕರು, ಸಾರ್ವಜನಿಕರು ಭಾಗವಹಿಸಿ ಪ್ರೇಮ್ ರಾವತ್ ಅವರ ಶಾಂತಿ, ಸಂದೇಶ ಸಾರುವ ಪ್ರವಚನವನ್ನು ವಿಡಿಯೋದಲ್ಲಿ ವೀಕ್ಷಿಸಿದರು.
ಸುಮಾರು ನೂರಕ್ಕೂ ಹೆಚ್ಚು ಸಂಖ್ಯೆಯ ಸ್ವಯಂ ಸೇವಕರು ಇದರಲ್ಲಿ ಉತ್ಸಾಹದಿಂದ ಪಾಲ್ಗೊಂಡು ಅಂತರಂಗದಲ್ಲಿ ಶಾಂತಿಯ ಹುಡುಕಾಟ ಎಂಬ ಶೀರ್ಷಿಕೆಯ ಉಡುಪುಗಳನ್ನು ಧರಿಸಿ ಜಗತ್ತಿನಲ್ಲಿ ಶಾಂತಿಯ ಸಂದೇಶ ಸಾರಿದರು.
ಪ್ರೇಮ್ ರಾವತ್ ಅವರನ್ನು ಅಂತಾರಾಷ್ಟ್ರೀಯ ಶಾಂತಿಯ ವಕ್ತಾರ ಎಂದೇ ಗುರುತಿಸಲಾಗಿದೆ. 250ಕ್ಕೂ ಹೆಚ್ಚು ನಗರಗಳಲ್ಲಿ ತಮ್ಮ ಶಾಂತಿಯ ಸಂದೇಶಗಳನ್ನು ನೀಡಿದ್ದಾರಲ್ಲದೆ, ಮಾನವ ಕಲ್ಯಾಣ ಕಾರ್ಯಗಳನ್ನು ಕೂಡ ನಿರ್ವಹಿಸುತ್ತಿದ್ದಾರೆ.
ಪ್ರೇಮ್ ರಾವತ್ ಫೌಂಡೇಷನ್ ಎಂಬ ಸಂಸ್ಥೆ ಮುಖಾಂತರ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತ ಬಂದದ್ದಾರೆ. ಇವರ ಶಾಂತಿಯ ಸಂದೇಶದ ಬಗ್ಗೆ ಜಾಗೃತಿ ಮೂಡಿಸಲು ಸ್ವಯಂಸೇವಕರು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಮುಂತಾದ ಕಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ.
ಕಳೆದ 21ರಂದು ನಗರದ ರೈಲ್ವೆ ನಿಲ್ದಾಣದಲ್ಲಿ ಅಂತರಂಗದಲ್ಲಿ ಶಾಂತಿಯ ಹುಡುಕಾಟ ಎಂಬ ಕಾರ್ಯಕ್ರಮದ ಬಗ್ಗೆ ಶಾಂತಿ ಸಂದೇಶದ ಜಾಗೃತಿ ಮೂಡಿಸಲಾಯಿತು.