ವಿಶ್ವದ ಅತಿ ದೊಡ್ಡ ಆರೋಗ್ಯ ಯೋಜನೆ ಆಯುಷ್ಮಾನ್​ ಭಾರತ್ ಗೆ ಇಂದು ಪ್ರಧಾನಿ ಚಾಲನೆ

ರಾಂಚಿ: ವಿಶ್ವದ ಅತಿ ದೊಡ್ಡ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮವಾದ ಆಯುಷ್ಮಾನ್​ ಭಾರತ್​-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ(AB-PMJAY)ಗೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಂಚಿಯಲ್ಲಿ ಚಾಲನೆ ನೀಡಲಿದ್ದಾರೆ.

50 ಕೋಟಿಗೂ ಹೆಚ್ಚು ಜನರನ್ನು ಗುರಿಯಾಗಿಸಿಕೊಂಡು ಅನುಷ್ಠಾನಗೊಳ್ಳುತ್ತಿರುವ ಈ ಯೋಜನೆಯು, ಸಾಮಾನ್ಯ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಲಿದೆ. ಎರಡನೇ ಹಾಗೂ ತೃತೀಯ ಹಂತದ ಆರೋಗ್ಯ ಸೇವೆಗಳಿಗಾಗಿ ಪ್ರತಿ ಕುಟುಂಬಕ್ಕೆ 5 ಲಕ್ಷದವರೆಗೆ ಧನ ಸಹಾಯ ಮಾಡಲಾಗುತ್ತದೆ. ಅಲ್ಲದೆ, ಈ ಯೋಜನೆಯು ನಗದು ರಹಿತ ಹಾಗೂ ಕಾಗದರಹಿತವಾಗಿ ಫಲಾನುಭವಿಗಳಿಗೆ ದೊರೆಯಲಿದೆ.
ಆರ್ಥಿಕವಾಗಿ ದುರ್ಬಲವಾಗಿರುವ ಮಂದಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ದೊರೆಯಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಮಹತ್ವದ ಯೋಜನೆ  ಜಾರಿಗೊಳಿಸುತ್ತಿದೆ. ಆಗಸ್ಟ್ 15ರಂದು ನಡೆದ 72ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಯ ಬಗ್ಗೆ ಪ್ರಸ್ತಾಪಿಸಿದ್ದರು. ಯೋಜನೆಗೆ ಚಾಲನೆ ನೀಡಿದ ನಂತರ ನಡೆಯುವ ಪ್ರಾತ್ಯಕ್ಷಿತೆಯನ್ನು ಪ್ರಧಾನಿ ಮೋದಿ ವೀಕ್ಷಿಸಲಿದ್ದಾರೆ. ಇದೇ ವೇಳೆ ವಿವಿಧ ಕಾಮಗಾರಿಗಳಿಗೂ ಅವರು ಚಾಲನೆ ನೀಡಲಿದ್ದಾರೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ