ಬೆಂಗಳೂರು, ಸೆ.23-ಪಕ್ಷ ನಿಷ್ಠರನ್ನು ಕಡೆಗಣಿಸಲಾಗುತ್ತಿದೆ. ನಾಯಕರ ಹಿಂಬಾಲಕರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಆರೋಪಿಸಿದ್ದಾರೆ.
ಖಾಸಗಿ ಹೊಟೇಲ್ನಲ್ಲಿ ಇಂದು ನಡೆದ ಕೆಪಿಸಿಸಿ ಪದಾಧಿಕಾರಿಗಳು, ಜಿಲ್ಲಾಧ್ಯಕ್ಷರು, ಮುಂಚೂಣಿ ಘಟಕದ ಅಧ್ಯಕ್ಷರ ಸಭೆಯಲ್ಲಿ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಅವಕಾಶವನ್ನೇ ನೀಡುತ್ತಿಲ್ಲ. ಪಕ್ಷಕ್ಕಾಗಿ ದುಡಿದವರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥರು, ಕಿಸಾನ್ ಘಟಕದ ಕಾರ್ಯಕ್ರಮಗಳನ್ನು ಪ್ರಚಾರ ಮಾಡುವುದೇ ಇಲ್ಲ. ರೈತರ ಸಮಸ್ಯೆಗಳು ಮತ್ತು ಅವುಗಳ ಪರಿಹಾರಕ್ಕೆ ನಡೆಸುತ್ತಿರುವ ಕಾರ್ಯಕ್ರಮಗಳ ಬಗ್ಗೆ ಯಾವುದೇ ಪ್ರಚಾರವನ್ನು ಪಕ್ಷದ ವತಿಯಿಂದ ನೀಡುತ್ತಿಲ್ಲ ಹಾಗೂ ಪರಿಣಾಮಕಾರಿಯಾಗಿ ಅವರೂ ಕೆಲಸ ಮಾಡುತ್ತಿಲ್ಲ. ಅವರನ್ನು ಬದಲಿಸಿ ಎಂದು ಆಗ್ರಹಿಸಿದ್ದಾರೆ.