ಬೆಂಗಳೂರು, ಸೆ.23- ನಾಡಿನಲ್ಲಿ ಸಾವಿರಕ್ಕೂ ಹೆಚ್ಚು ಜನರು ಹನಿಗವಿತೆ ಬರೆಯುವವರು ಇದ್ದರೂ ಅವರಲ್ಲಿ ಶಿವಶಂಕರ್ ಮೊದಲಿಗರು ಎಂದು ಹಿರಿಯ ಸಾಹಿತಿ ಚಂದ್ರಶೇಖರ ಪಾಟೀಲ ಬಣ್ಣಿಸಿದರು.
ಕರ್ನಾಟಕ ವಿಕಾಸ ರಂಗ ವತಿಯಿಂದ ಜರಗನಹಳ್ಳಿ ಶಿವಶಂಕರ್ ಅವರ 70ನೆ ಹುಟ್ಟುಹಬ್ಬದ ಅಂಗವಾಗಿ ಏರ್ಪಡಿಸಿದ್ದ ಸಾಹಿತ್ಯ ಸಹವಾಸ ಎಂಬ ಕಾರ್ಯಕ್ರಮ ಜರಗನಹಳ್ಳಿ ಶಿವಶಂಕರ್ ಅವರ ಕವನ ಸಂಕಲನ ಮತ್ತು ಹನಿಗವಿತೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ಶಿವಶಂಕರ್ ಅವರು ಅತ್ಯಂತ ಸರಳ ಸ್ವಭಾವದವರು ಮತ್ತು ನೇರ ನುಡಿಯ ವ್ಯಕ್ತಿತ್ವ ಹೊಂದಿದವರು ಎಂದು ತಿಳಿಸಿದರು.
ಜಗತ್ತಿನಲ್ಲಿರುವ ವಾಸ್ತವ್ಯವನ್ನು ಬರವಣಿಗೆ ಮೂಲಕ ನೀಡುವುದು ಬರಹಗಾರನ ಕೆಲಸವಾಗಿದೆ. 10, 12 ಪದಗಳ ಪುಂಜವನ್ನು ಬಳಸಿ ಹನಿಗವನ ರಚಿಸಿ ಅದಕ್ಕೆ ನೂರಾರು ಅರ್ಥಗಳನ್ನು ಕೊಡಬಹುದಾದ ಕೆಲಸ ಬರಹಗಾರನದ್ದಾಗಿರುತ್ತದೆ ಎಂದು ವ್ಯಾಖ್ಯಾನಿಸಿದರು.
ಸಾಹಿತಿ ಅರವಿಂದ ಮಾಲಗತ್ತಿ ಮಾತನಾಡಿ, ಜರಗನಹಳ್ಳಿ ಶಿವಶಂಕರ್ ಅವರನ್ನು ಹನಿಗವಿ, ವರಕವಿ ಎಂಬುದೂ ಸೇರಿದಂತೆ ಹಲವಾರು ಹೆಸರುಗಳಿಂದ ಅವರನ್ನು ಕರೆಯಬಹುದಾಗಿದೆ. ಯಾವುದು ಅಸಾಧ್ಯವೋ ಅದನ್ನು ಸಾಧ್ಯ ಮಾಡಿ ತೋರಿಸುವ ಗುಣವು ಶಿವಶಂಕರ್ ಅವರಲ್ಲಿದೆ ಎಂದು ತಿಳಿಸಿದರು.
ಇವರು ಪ್ರಕೃತಿಯನ್ನು ಗಂಭೀರವಾಗಿ ಪರಿಗಣಿಸಿದ ಕವಿಯಾಗಿದ್ದಾರೆ. ಆದ್ದರಿಂದ ಇವರನ್ನು ಪ್ರಕೃತಿಯ ಹನಿಗವಿ ಎಂದು ಸಹ ಕರೆಯಬಹುದಾಗಿದೆ. ಶಿವಶಂಕರ್ ಅವರು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಹನಿಗವಿತೆಗಳನ್ನು ನೀಡಲಿ ಎಂದು ಆಶಿಸಿದರು.
ಜರಗನಹಳ್ಳಿ ಶಿವಶಂಕರ್ ಅವರ ನದಿ ಎಂಬ ಕವನ ಸಂಕಲನ ಹಾಗೂ ಪನ್ನೀರು ಎಂಬ ಹನಿಗವಿತೆಯ ಗುಚ್ಛವನ್ನು ಬಿಡುಗಡೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಪೆÇ್ರ.ಸಿದ್ದಲಿಂಗ ಪಟ್ಟಣಶೆಟ್ಟಿ, ಸಪ್ನ ಬುಕ್‍ಹೌಸ್‍ನ ನಿತಿನ್ ಷಾ, ಎನ್.ರಾಮನಾಥ್, ಡಾ.ಸಂತೋಷ್ ಹಾನಗಲ್, ವ.ಚ.ಚನ್ನೇಗೌಡ ಸೇರಿದಂತೆ ಮತ್ತಿತರರಿದ್ದರು.