ಬೆಂಗಳೂರು, ಸೆ.23- ವಿಧಾನಸಭೆಯಿಂದ ವಿಧಾನ ಪರಿಷತ್ಗೆ ನಡೆಯಲಿರುವ ಚುನಾವಣೆಯಲ್ಲಿ ಪ್ರತಿಪಕ್ಷ ಬಿಜೆಪಿ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ.
ಅ.4ರಂದು ನಡೆಯಲಿರುವ ಮೇಲ್ಮನೆಯ ಮೂರು ಸ್ಥಾನಗಳ ಚುನಾವಣೆಗೆ ಬಿಜೆಪಿಯು ಮಾಜಿ ಸದಸ್ಯರಾದ ಪುಟ್ಟಸ್ವಾಮಿ, ಡಿ.ಎಸ್.ವೀರಯ್ಯ, ಭಾರತಿಶೆಟ್ಟಿ, ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಹಾಗೂ ಮುಖಂಡ ಚಿ.ನಾ.ರಾಮು ಅವರನ್ನು ಕಣಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ.
ನಾಳೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾಗಿರುವುದರಿಂದ ಇಂದು ಸಂಜೆಯೊಳಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಶಾಸಕರಾದ ಕೆ.ಎಸ್.ಈಶ್ವರಪ್ಪ ಮತ್ತು ವಿ.ಸೋಮಣ್ಣ ಅವರುಗಳು ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಲಾಗಿತ್ತು. ತೆರವಾಗಿರುವ ಈ ಮೂರು ಸ್ಥಾನಗಳಿಗೆ ಮುಂದಿನ ತಿಂಗಳು 4ರಂದು ಚುನಾವಣೆ ನಡೆಯಲಿದೆ.
ಮೇಲ್ಮನೆಗೆ ಆಯ್ಕೆಯಾಗಬೇಕಾದರೆ ಒಬ್ಬ ಅಭ್ಯರ್ಥಿ 112 ಮತಗಳನ್ನು ಪಡೆಯಬೇಕೆಂದು ಆಯೋಗ ನಿಗದಿಪಡಿಸಿದೆ. ಯಾವುದೇ ಪಕ್ಷ ಇಷ್ಟು ಸಂಖ್ಯೆಯ ಮತಗಳನ್ನು ಹೊಂದಿಲ್ಲ. ಈಗಾಗಲೇ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿರುವುದರಿಂದ ಚುನಾವಣೆಯಲ್ಲೂ ದೋಸ್ತಿ ಮುಂದುವರಿಯಲಿದೆ.
ಕಾಂಗ್ರೆಸ್ 80, ಜೆಡಿಎಸ್ 37 ಸದಸ್ಯರನ್ನು ಹೊಂದಿದೆ. ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಒಟ್ಟು ಸಂಖ್ಯೆ 117 ಆಗುವುದರಿಂದ ಮೂರು ಸ್ಥಾನಗಳನ್ನು ಮೈತ್ರಿ ಪಕ್ಷ ಪಡೆಯಬಹುದು.
ಈ ಚುನಾವಣೆ ಮೂರು ಸ್ಥಾನಗಳಿಗೆ ಪ್ರತ್ಯೇಕವಾಗಿ ನಡೆಯುವುದರಿಂದ ಬಿಜೆಪಿ ಅತಿ ಹೆಚ್ಚು ಅಂದರೆ 104 ಸ್ಥಾನಗಳನ್ನು ಹೊಂದಿದ್ದರೂ ಯಾವುದೇ ಸ್ಥಾನ ಪಡೆಯಲು ಸಾಧ್ಯವಾಗುವುದಿಲ್ಲ. ಇದೀಗ ಆಡಳಿತಾರೂಢ ಕಾಂಗ್ರೆಸ್ನಲ್ಲಿ ಉಂಟಾಗಿರುವ ಭಿನ್ನಮತದ ಲಾಭ ಪಡೆಯಲು ಪ್ರತಿಪಕ್ಷ ಹವಣಿಸುತ್ತಿದೆ.
ಪರಿಷತ್ ಚುನಾವಣೆಯಲ್ಲಿ ರಹಸ್ಯವಾಗಿ ಮತದಾನ ನಡೆಯುವುದರಿಂದ ಭಿನ್ನಮತದ ಲಾಭ ತನಗೆ ವರವಾಗಬಹುದೆಂಬ ನಿರೀಕ್ಷೆ ಬಿಜೆಪಿ ಪಾಳಯದಲ್ಲಿದೆ. ಹೀಗಾಗಿ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ.