ಬೆಂಗಳೂರು: ನಗರಾದ್ಯಂತ ೬ ತಿಂಗಳೊಳಗಾಗಿ ಉಚಿತ ವೈಫೈ ಸೌಲಭ್ಯ ಕಲ್ಪಿಸಿಕೊಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದರು.
ಗೋವಿಂದರಾಜ ನಗರದಲ್ಲಿ ಬಿಬಿಎಂಪಿ ಪಾಲಿಕೆ ಸೌಧ, ಅಟಲ್ ಜಿ ಕ್ರೀಡಾ ಸೌಧ, ಉಚಿತ ವೈಫೈ, ಕೆಂಪೇಗೌಡರ ಪ್ರತಿಮೆ, ಪ್ರಧಾನಮಂತ್ರಿ ಜನೌಷಧ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು.
ಗೋವಿಂದರಾಜು ನಗರದಲ್ಲಿ ಉಚಿತ ವೈಫೈ ಸೌಲಭ್ಯ ನೀಡಲಾಗಿದೆ. ಇದೇ ಮಾದರಿಯಲ್ಲಿ ಉಳಿದ 198 ವಾರ್ಡ್ಗಳಲ್ಲೂ ಮಾಡಲಾಗುವುದು ಎಂದು ಹೇಳಿದರು.
ಕೆಂಪೇಗೌಡರ ದೂರದೃಷ್ಟಿಯಿಂದ ಇಂದು ಬೆಂಗಳೂರು ವಿಶ್ವದಲ್ಲೇ ಗುರುತಿಸಿಕೊಳ್ಳುತ್ತಿದೆ. ಸಿಟಿ ಪ್ಲಾನರ್ಸ್ಗಳಿಗೂ ಮೀರಿ ಕೆಂಪೇಗೌಡರು ಬೆಂಗಳೂರು ಪಟ್ಟಣವನ್ನು ವಿನ್ಯಾಸ ಮಾಡಿಕೊಟ್ಟಿದ್ದಾರೆ. ಇಂದು ಬೆಂಗಳೂರು ಅತಿವೇಗವಾಗಿ ಬೆಳೆಯುತ್ತಿದೆ. ಅಷ್ಟೇ ಅಭಿವೃದ್ಧಿ ಕೆಲಸಗಳು ನೆರವೇರಿವೆ ಎಂದರು.
ನಗರದ ಹೆಚ್ಚು ಆಪ್ಟಿಕಲ್ ಫೈಬರ್ ಕೇಬಲ್ಗಳನ್ನು ಅನಧಿಕೃತವಾಗಿ ಎಳೆಯಲಾಗಿದೆ. ಇದನ್ನು ತೆರವುಗೊಳಿಸುವ ಕೆಲಸ ಮಾಡಲಾಗುತ್ತಿದೆ ಎಂದರು.
ನಗರದಲ್ಲಿ ತೆರಿಗೆ ಸಂಗ್ರಹದ ಬಗ್ಗೆ ಕಠಿಣ ನಿರ್ಧಾರ ಕೈಗೊಂಡಿದ್ದು, ಈ ಸಾಲಿನಲ್ಲಿ 2.5 ಸಾವಿರ ಕೋಟಿ ತೆರಿಗೆ ಸಂಗ್ರಹ ಮಾಡದೇ ಇದ್ದರೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಇತರೆ ಮಾರ್ಗಗಳ ಸಂಪನ್ಮೂಲ ಕ್ರೂಢಿಕರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ನಗರದ ಅಂದ ಹಾಳು ಮಾಡುತ್ತಿದ್ದ ಫ್ಲೆಕ್ಸ್ ತೆರವು ಮಾಡಲಾಗಿದೆ. ರಸ್ತೆ ಗುಂಡಿ ಮುಚ್ಚಲು ಹಂತಹಂತವಾಗಿ ವೈಟ್ಟಾಪಿಂಗ್ ಮಾಡಲಾಗುತ್ತಿದೆ ಎಂದು ಹೇಳಿದರು.
ಗೋವಿಂದರಾಜು ನಗರದಲ್ಲಿ ೨೦೦ ಬೆಡ್ ಆಸ್ಪತ್ರೆಗೆ ಸೋಮಣ್ಣ ಅವರು ಮನವಿ ನೀಡಿದ್ದಾರೆ. ಕೂಡಲೇ ಇದಕ್ಕೆ ಮಂಜೂರು ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.